ಬೆಂಗಳೂರು : ರೋಡ್ ರೇಜ್ಗೆ ಸಂಬಂಧಿಸಿದಂತೆ ಇಬ್ಬರು ವಾಹನ ಸವಾರರ ಮಧ್ಯೆ ನಡೆದ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ದಾಂಧಲೆ ಮಾಡಿದ್ದ ರೌಡಿಶೀಟರ್ ಸಹಿತ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಪ್ರಸಾದ್ ಅಲಿಯಾಸ್ ಮೆಂಟಲ್ ಪ್ರಸಾದ್ ಹಾಗೂ ಮಧುಸೂದನ್ ಬಂಧಿತ ಆರೋಪಿಗಳು. ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೆ ಯತ್ನಿಸಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಕಳೆದ ನವೆಂಬರ್ 21ರಂದು ರಾತ್ರಿ 10:45ರ ಸುಮಾರಿಗೆ ಶಾಜುಮೋನ್ ಎಂಬುವರು ಸಾಗುತ್ತಿದ್ದ ಕಾರು ದ್ವಿಚಕ್ರ ವಾಹನವೊಂದಕ್ಕೆ ಟಚ್ ಆಗಿತ್ತು. ಆ ವಿಚಾರವಾಗಿ ಶಾಜಮೋನ್ ಹಾಗೂ ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲಿ ನಿಂತು ಗಲಾಟೆ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ರಸ್ತೆ ಬದಿ ನಿಂತಿದ್ದ ರೌಡಿಶೀಟರ್ ಪ್ರಸಾದ್ ಹಾಗೂ ಮಧುಸೂದನ್ ಏಕಾಏಕಿ ಕಲ್ಲು ತಂದು ಕಾರಿನ ಮೇಲೆ ಎತ್ತಿಹಾಕಿದ್ದರು. ನಂತರ ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ಆಗ ಇಬ್ಬರ ದಾಂಧಲೆ ಕಂಡು ದ್ವಿಚಕ್ರ ವಾಹನ ಸವಾರ ಸ್ಥಳದಿಂದ ತೆರಳಿದ್ದ. ಈ ವೇಳೆ ಪೊಲೀಸರಿಗೆ ಕರೆ ಮಾಡಲು ಮುಂದಾಗಿದ್ದ ವಿನೋದ್ ರಾವಲ್ ಎಂಬಾತನ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆ, ಹತ್ಯೆಯತ್ನ, ರಾಬರಿ ಸೇರಿದಂತೆ 10 ವರ್ಷಗಳಿಂದಲೂ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿ ಪ್ರಸಾದ್ ಹಲವು ಬಾರಿ ಜೈಲು ಶಿಕ್ಷೆ ಸಹ ಅನುಭವಿಸಿದ್ದ. ಒಂದು ತಿಂಗಳ ಹಿಂದೆಯಷ್ಟೇ ರಿಲೀಸ್ ಆಗಿ ಬಂದಿದ್ದ. ಈಗ ಮತ್ತೊಮ್ಮೆ ಹತ್ಯೆ ಯತ್ನದ ಆರೋಪದಡಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕನ್ನಡ ಶಾಲೆಗಳನ್ನ ಮುಚ್ಚದಂತೆ ನೋಡ್ಕೊಳ್ಳಿ | ಕನ್ನಡಾಭಿಮಾನ ಮೆರೆದ ನಟ ಡಾಲಿ ಧನಂಜಯ್



















