ಬಾಗಲಕೋಟೆ : ಜಿಟಿ ಜಿಟಿ ಮಳೆಗೆ ತಳಕವಾಡ ಗ್ರಾಮದಿಂದ ಆಶ್ರಯ ಪ್ಲಾಟ್‌ಗೆ ಹೋಗುವ ಮುಖ್ಯ ರಸ್ತೆಯು ಕೆಸರು ಗದ್ದೆಯಂತಾಗಿದೆ. ಇದರಿಂದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಈ ಕೆಸರು ರಸ್ತೆಯಲ್ಲೇ ವೃದ್ದರು, ಮಕ್ಕಳು ಎದ್ದು ಬಿದ್ದು ನಡೆದು ಹೋಗುತ್ತಿದ್ದು, ನಿತ್ಯ ಹೊಲ, ಗದ್ದೆಗಳಿಗೆ ಹೋಗಿ ಬರುವ ರೈತರು ಹಾಗೂ ಬೈಕ್ ಸವಾರರಿಗೆ ಈ ಅರ್ಧ ಕಿಮೀ ರಸ್ತೆ ತಲೆ ನೋವಾಗಿ ಪರಿಣಮಿಸಿದೆ.
2009ರ ಮಲಪ್ರಭಾ ನದಿ ಪ್ರವಾಹ ಬಂದಾಗ ಆಶ್ರಯ ಪ್ಲಾಟ್ ನಿರ್ಮಾಣ ಮಾಡಲಾಗಿದ್ದು, 192 ಕುಟುಂಬಗಳ ಅಂದಾಜು 700-800 ಜನರು ವಾಸವಿರುವ ಈ ಪ್ಲಾಟ್ ನಲ್ಲಿ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಆಲೂರು ಎಸ್.ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಳಕವಾಡದ ಆಶ್ರಯ ಪ್ಲಾಟ್ ನಿಂದ ಪ್ರತಿನಿತ್ಯವೂ100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕೆಸರು ಗದ್ದೆಯಂತಿರುವ ರಸ್ತೆ ಮಾರ್ಗವಾಗಿಯೇ ತಳಕವಾಡ ಗ್ರಾಮದ ಶಾಲೆಗೆ ಹೋಗುತ್ತಾರೆ.
ಶಾಲಾ ಮಕ್ಕಳನ್ನು ಕಳಿಹಿಸುವುದಕ್ಕೆ ಹೊರಟ ಮಹಿಳೆಯು ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಪಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ತನ್ನ ಆಕ್ರೋಶ ಹೊರಹಾಕಿದ್ದಾಳೆ.



















