ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಾಳಯದಲ್ಲಿ ತಡರಾತ್ರಿ ಹೈಡ್ರಾಮಾ ನಡೆದಿದೆ. ನಿನ್ನೆ ಸಂಜೆ ವೇಳೆ ಪಕ್ಷದ ಚಿಹ್ನೆಗಳನ್ನು ಪಡೆದಿದ್ದ ಹಲವಾರು ನಾಯಕರಿಗೆ ರಾತ್ರಿ ತುರ್ತು ಕರೆಮಾಡಿ ಚಿಹ್ನೆಗಳನ್ನು ಹಿಂತಿರುಗಿಸಲು ಸೂಚನೆ ನೀಡಲಾಗಿದೆ. ದೆಹಲಿಯಿಂದ ಪಾಟ್ನಾಗೆ ತೇಜಸ್ವಿ ಯಾದವ್ ಮರಳಿದ ತಕ್ಷಣವೇ ಈ ತಿರುವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಲಾಲು ಪ್ರಸಾದ್ ಯಾದವ್ ದೆಹಲಿಯಿಂದ ವಾಪಸ್ ಆಗಿ ತಮ್ಮ ನಿವಾಸಕ್ಕೆ ತಲುಪಿದಾಗ ಟಿಕೆಟ್ ಆಕಾಂಕ್ಷಿಗಳ ದಂಡು ಹೊರಗಡೆ ಕಾಯುತ್ತಿತ್ತು. ಪಕ್ಷದೊಳಗಿನಿಂದ ಕರೆ ಬಂದ ಕೆಲವರು ಒಳಗೆ ತೆರಳಿ, ಕೆಲವು ನಿಮಿಷಗಳಲ್ಲಿ ಹಳದಿ ಲಕೋಟೆಗಳೊಂದಿಗೆ ಹೊರಬಂದರು. ಆ ಲಕೋಟೆಗಳಲ್ಲಿ ಅವರನ್ನು ಅಧಿಕೃತ ಅಭ್ಯರ್ಥಿಗಳಾಗಿ ಮಾನ್ಯಗೊಳಿಸುವ ದಾಖಲೆಗಳಿದ್ದವು ಎಂದು ತಿಳಿದುಬಂದಿದೆ.
ಕೆಲವೇ ಗಂಟೆಗಳ ಬಳಿಕ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ದೆಹಲಿಯಿಂದ ಪಾಟ್ನಾದ ತಮ್ಮ ನಿವಾಸಕ್ಕೆ ತಲುಪಿದರು. ಇದಾದ ಸ್ವಲ್ಪದರಲ್ಲೇ ಸಂಜೆ ಚಿಹ್ನೆ ಪಡೆದಿದ್ದ ಎಲ್ಲ ನಾಯಕರಿಗೂ ದೂರವಾಣಿ ಕರೆಮಾಡಿ, ನಾಯಕರ ನಿವಾಸಕ್ಕೆ ಬಂದು ಚಿಹ್ನೆಗಳನ್ನು ಹಿಂತಿರುಗಿಸಲು ಸೂಚಿಸಲಾಯಿತು. ತಡರಾತ್ರಿ ಲಾಲು ನಿವಾಸದ ಮುಂದೆ ಮತ್ತೆ ದೊಡ್ಡ ಜನಸ್ತೋಮ ನೆರೆದ ದೃಶ್ಯಗಳು ಹೊರಬಂದಿವೆ.
ಚಿಹ್ನೆಗಳನ್ನು ಹಿಂತಿರುಗಿಸಲು ಏಕೆ ಕೇಳಲಾಯಿತು ಎಂಬುದನ್ನು ಯಾರಿಗೂ ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಕೆಲವು ನಾಯಕರು ಹೇಳಿದ್ದಾರೆ. ಕೆಲವರು, ವಿಶೇಷವಾಗಿ ಅಶ್ರಫ್ ಫತ್ಮಿ, “ಯಾರಿಗೂ ಚಿಹ್ನೆಯೇ ನೀಡಿಲ್ಲ; ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ‘ಎಐ ರಚಿತ’”ಎಂದು ಹೇಳಿದ್ದಾರೆ.
ಸಂಜೆ ಚಿಹ್ನೆ ಪಡೆದು ರಾತ್ರಿ ವಾಪಸ್ ನೀಡಿದವರಲ್ಲಿ, ಇತ್ತೀಚೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ತೊರೆದು ಬಂದ ಸುನೀಲ್ ಸಿಂಗ್ ಹಾಗೂ ಮಾಜಿ ಶಾಸಕ ನರೇಂದ್ರ ಕುಮಾರ್ ಸಿಂಗ್ ಅಲಿಯಾಸ್ ‘ಬೊಗೊ’ ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಇನ್ನೂ ಅಂತಿಮವಾಗದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಎಡಪಕ್ಷಗಳು, ಮುಖೇಶ್ ಸಹಾನಿಯ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ನೇತೃತ್ವದ ಆರ್‌ಎಲ್‌ಜೆಪಿ ಸೀಟು ಹಂಚಿಕೆ ಮಾತುಕತೆಯಲ್ಲಿ ತೊಡಗಿಕೊಂಡಿವೆ.