ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಮಹಾಘಟಬಂಧನ್’ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಬಿಕ್ಕಟ್ಟು ಮುಂದುವರಿದಿದ್ದು, ಇದರ ನಡುವೆಯೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಏಕಪಕ್ಷೀಯವಾಗಿ 143 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಎರಡನೇ ಹಂತದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದಂದು ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಯಾರಿಗೆಲ್ಲ ಟಿಕೆಟ್?
ಹೊಸ ಪಟ್ಟಿಯ ಪ್ರಕಾರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ವೈಶಾಲಿ ಜಿಲ್ಲೆಯ ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2020ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಆರ್‌ಜೆಡಿ ಒಂದು ಸ್ಥಾನ ಕಡಿಮೆ ಅಂದರೆ, 143 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಬಾರಿ 144 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನವೇ ಪಕ್ಷವು ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಿತ್ತು.
ಪಟ್ಟಿಯಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ತೇಜಸ್ವಿ ಯಾದವ್: ರಾಘೋಪುರ
ಚಂದ್ರಶೇಖರ್: ಮಧೇಪುರ
ವೀಣಾ ದೇವಿ (ಸೂರಭಾನ್ ಪತ್ನಿ): ಮೊಕಾಮಾ
ಉದಯ್ ನಾರಾಯಣ ಚೌಧರಿ: ಝಾಝಾ
“ಮಹಾಘಟಬಂಧನ್‌ನಲ್ಲಿ ಬಿರುಕು”
‘ಮಹಾಘಟಬಂಧನ್’ ಮೈತ್ರಿಕೂಟದಲ್ಲಿ ಆರ್‌ಜೆಡಿ ಜೊತೆಗೆ ಕಾಂಗ್ರೆಸ್, ಸಿಪಿಐ(ಎಂಎಲ್), ಸಿಪಿಐ, ಸಿಪಿಎಂ ಮತ್ತು ಮುಕೇಶ್ ಸಹಾನಿಯವರ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಇವೆ. ಆದರೆ, ಸೀಟು ಹಂಚಿಕೆ ಕುರಿತು ಇನ್ನೂ ಒಮ್ಮತ ಮೂಡಿಲ್ಲ. ಈ ನಡುವೆ ಆರ್‌ಜೆಡಿ ಏಕಾಂಗಿಯಾಗಿ ಪಟ್ಟಿ ಬಿಡುಗಡೆ ಮಾಡಿರುವುದು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತದೆ. ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ನಡುವೆ ‘ಸೌಹಾರ್ದ ಸ್ಪರ್ಧೆ’ ಏರ್ಪಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.