ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ (ರಾಮಲಲ್ಲಾ) ಪ್ರಾಣ ಪ್ರತಿಷ್ಠಾಪನೆಯಾಗಿ ಇಂದಿಗೆ (ತಿಥಿಯ ಪ್ರಕಾರ) ಎರಡು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಅದೇ ಸಮಯದಲ್ಲಿ, 2026ರ ಹೊಸ ವರ್ಷವನ್ನು ಸ್ವಾಗತಿಸಲು ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ರಾಮನಗರಿಗೆ ಆಗಮಿಸುತ್ತಿದ್ದಾರೆ. ದೇವಾಲಯ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗಿದೆ.
ತಿಥಿ ಆಧಾರದಲ್ಲಿ ವಿಶೇಷ ಆಚರಣೆ
ಹಿಂದೂ ಪಂಚಾಂಗದ ಸಾಂಪ್ರದಾಯಿಕ ತಿಥಿಯ ಪ್ರಕಾರ ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವ ಆಚರಣೆಗೆ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಜನವರಿ 22, 2024ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದರು. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನವರಿ 22 ರಂದು ವಾರ್ಷಿಕೋತ್ಸವ ಬರುವುದಾದರೂ, ದೇವಾಲಯದ ಟ್ರಸ್ಟ್ ಸಾಂಪ್ರದಾಯಿಕ ಹಿಂದೂ ಪಂಚಾಂಗದ ತಿಥಿಯ ಅನುಸಾರ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಹೀಗಾಗಿ ಹಿಂದೂ ಪಂಚಾಂಗದ ಪ್ರಕಾರ, ಪೌಷ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು (ಇಂದು) ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದಿನ ಕಾರ್ಯಕ್ರಮದ ಮುಖ್ಯ ಯಜಮಾನನಾಗಿ ಭಾಗಿಯಾಗಲಿದ್ದು, ರಾಮಮಂದಿರ ಸಂಕೀರ್ಣದಲ್ಲಿರುವ ಅನ್ನಪೂರ್ಣ ಮಂದಿರದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿರಲಿದ್ದಾರೆ. ಉಡುಪಿಯ ಪೇಜಾವರ ಮಠದ ಸ್ವಾಮೀಜಿಗಳ ಸಾರಥ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ.
“ಜೈ ಶ್ರೀರಾಮ್! ಇದೇ ಶುಭ ತಿಥಿಯಂದು ಎರಡು ವರ್ಷಗಳ ಹಿಂದೆ 500 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿತು ಮತ್ತು ಮೋದಿ ಜೀ ಅವರು ರಾಮ ಜನ್ಮಭೂಮಿ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಪ್ರಾಣ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದಂದು ಎಲ್ಲರಿಗೂ ಹಾರ್ದಿಕ ಶುಭಾಶಯಗಳು,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಜನಸಂದಣಿ: ಭದ್ರತೆ-ನಿಯಂತ್ರಣ ಕ್ರಮ
ಹೊಸ ವರ್ಷಕ್ಕೂ ಮುನ್ನ ಬಾಲರಾಮನ ದರ್ಶನ ಪಡೆಯುವ ಉದ್ದೇಶದಿಂದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಅಯೋಧ್ಯೆಗೆ ಆಗಮಿಸುತ್ತಿದ್ದು, ದೇವಾಲಯದ ಪ್ರವೇಶ/ನಿರ್ಗಮನ ಮಾರ್ಗಗಳಲ್ಲಿ ಸರತಿ ವ್ಯವಸ್ಥೆ ಕಟ್ಟು ನಿಟ್ಟಾಗಿ ಜಾರಿಯಲ್ಲಿದೆ. ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ನಿಯೋಜನೆ, ಬ್ಯಾರಿಕೇಡ್ ಮತ್ತು ಗಸ್ತು ವೃದ್ಧಿ ಸೇರಿದಂತೆ ಟ್ರಾಫಿಕ್-ಜನನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಕೋಗಿಲು ಲೇಔಟ್ ಜಟಾಪಟಿ | ಕೇರಳ ಸಿಎಂ ಪಿಣರಾಯಿ ಜೊತೆ ಸಿದ್ದರಾಮಯ್ಯ ಆತ್ಮೀಯ ಕುಶಲೋಪರಿ


















