ನವದೆಹಲಿ: ಬ್ರಿಟನ್ ಮಾಜಿ ಪ್ರಧಾನಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಭಾರತ ಪ್ರವಾಸದಲ್ಲಿದ್ದು, ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯಸಭೆ ಸದಸ್ಯೆಯೂ ಆಗಿರುವ ಸುಧಾ ಮೂರ್ತಿ ಅವರು ಕೂಡ ಮೋದಿ ಭೇಟಿಗೆ ಸಾಥ್ ನೀಡಿದ್ದಾರೆ.
ರಿಷಿ ಸುನಕ್ ಅವರು ಸುಧಾ ಮೂರ್ತಿ, ಪತ್ನಿ ಅಕ್ಷತಾ ಮುರ್ತಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ತೆರಳಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗೆ ಬ್ರಿಟನ್ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ರಿಷಿ ಸುನಕ್ ಅವರು ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ತಾಜ್ ಮಹಲ್ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ರಿಷಿ ಸುನಕ್ ಅವರು ಕುಟುಂಬಸ್ಥರೊಂದಿಗೆ ಭೇಟಿ ನೀಡಿದ್ದಾರೆ.
ರಿಷಿ ಸುನಕ್ ಭೇಟಿ ಬಳಿಕ ನರೇಂದ್ರ ಮೋದಿ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಅವರ ಜತೆ ಹತ್ತಾರು ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು. ರಿಷಿ ಸುನಕ್ ಅವರು ಭಾರತದ ಆತ್ಮೀಯ ಗೆಳೆಯರಾಗಿದ್ದು, ಭಾರತ-ಬ್ರಿಟನ್ ಸಂಬಂಧ, ಒಪ್ಪಂದಗಳ ಕುರಿತು ಅವರು ಹೊಂದಿರುವ ಆಸಕ್ತಿ ಪ್ರಮುಖವಾದುದು” ಎಂದು ಫೋಟೊಗಳ ಸಮೇತ ಮೋದಿ ಅವರು ಪೋಸ್ಟ್ ಮಾಡಿದ್ದಾರೆ.