ಚಂದನವನದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇಂದು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ದೆಹಲಿಯಲ್ಲಿ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್ ಧಕ್ಕಿದೆ. ನಟ ರಿಷಬ್ ಅವರು ಪತ್ನಿ ಸಮೇತರಾಗಿ ದೆಹಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ನಮ್ಮ ನೆಲದ ಸೊಗಡಿಗೆ ಹೆಚ್ಚು ಬೆಲೆ ನೀಡುತ್ತಾರೆ. ಅವರು ಸಿನಿಮಾಗಳಲ್ಲೂ ಅದು ಎದ್ದು ಕಾಣುತ್ತದೆ. ‘ಕಾಂತರ’ ಸಿನಿಮಾದ ಮೂಲಕ ಅವರು ದೇಸಿ ಕತೆಯನ್ನು ಚಿತ್ರ ರಸಿಕರಿಗೆ ಹೇಳಿದ್ದರು. ಆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಅವರ ನಟನೆಯನ್ನು ನೋಡಿ ಪ್ರೇಕ್ಷಕರು ಫಿದಾ ಆದರು. ‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಆದರು.
ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಈಗ ನೆಚ್ಚಿನ ನಟರಾಗಿದ್ದಾರೆ. 2022ರಲ್ಲಿ ‘ಕಾಂತಾರ’ ಸಿನಿಮಾ ತೆರೆ ಕಂಡಿತ್ತು. ‘ಹೊಂಬಾಳೆ ಫಿಲ್ಸ್’ ಮೂಲಕ ನಿರ್ಮಾಣ ಆದ ಈ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಭೂತಕೋಲದ ಕಥೆ ಇರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದರು. ಈ ಚಿತ್ರ ಬೇರೆ ಭಾಷೆಗಳಲ್ಲೂ ಯಶಸ್ಸು ಕಂಡಿದೆ. ಸದ್ಯ ರಾಷ್ಟ್ರ ಪ್ರಶಸ್ತಿ ಪಡೆದಿದ್ದಕ್ಕೆ ಇಡೀ ಕರ್ನಾಟಕ ಅಭಿನಂದನೆ ಸಲ್ಲಿಸುತ್ತಿದೆ.


















