ಹಲವಾರು ಸೆಲೆಬ್ರಿಟಿಗಳು ಯಶಸ್ಸಿನ ಉತ್ತುಂಗಕ್ಕೆ ಏರಿದ್ದೇ ತಡ ಎಲ್ಲವನ್ನೂ ಮರೆತು ಬಿಡುತ್ತಾರೆ. ನಡೆದು ಬಂದ ಸಾಧನೆಯ ಹಾದಿಯನ್ನೂ ಮರೆತು, ಕುಟುಂಬಸ್ಥರು, ಸಂಬಂಧಿಕರಿಂದ ದೂರವಾಗುವುದನ್ನು ನಾವು ನೋಡಿರುತ್ತೇವೆ. ಆದರೆ, ರಿಷಬ್ ಶೆಟ್ಟಿ ಮಾತ್ರ ಇದಕ್ಕೆ ಅಪವಾದ.
ಅವರ ನಟನೆಯಷ್ಟೇ, ಅವರ ಸಂಸ್ಕಾರ ಚಂದ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುವಂತಹ ವಿಷಯ ಈಗ ಮತ್ತೆ ಬಹಿರಂಗವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಸಿನಿಮಾ ಎಷ್ಟೇ ಎತ್ತರಕ್ಕೆ ಬೆಳೆದು ನಿಂತರೂ ಪತ್ನಿಯನ್ನು ಮಾತ್ರ ಹೊಗಳುವುದನ್ನು ಬಿಟ್ಟಿಲ್ಲ. ‘ಕಾಂತಾರ’ ಸಿನಿಮಾದ ಯಶಸ್ಸಿನ ಆರಂಭದಿಂದಲೂ ರಿಷಬ್ ತನ್ನ ಪತ್ನಿ ಮಾಡಿದ ಉಪಕಾರವನ್ನು ಸ್ಮರಿಸುತ್ತಲೇ ಇದ್ದಾರೆ. ಇದೀಗ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಂದಿದೆ. ಅಲ್ಲದೇ, ಈ ಸಿನಿಮಾಕ್ಕೆ ‘ಅತ್ಯುತ್ತಮ ಮನರಂಜನಾ ಚಿತ್ರ’ ಅವಾರ್ಡ್ ಕೂಡ ಸಿಕ್ಕಿದೆ.
ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ರಿಷಬ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಆಡಿದ ಪ್ರಾಮಾಣಿಕ ಮಾತು ಎಲ್ಲರೂ ಮೆಚ್ಚುವಂತೆ ಮಾಡಿದೆ. ಈ ಯಶಸ್ಸು ನನ್ನ ತಂಡಕ್ಕೆ ಸೇರುತ್ತದೆ. ನಾನು ಈ ಹಿಂದೆಯೇ ಪುನೀತ್ ರಾಜಕುಮಾರ್, ದೈವನರ್ತಕರಿಗೆ ಈ ಸಿನಿಮಾ ಅರ್ಪಿಸಿದ್ದೆ. ಈಗಲೂ ಅದೇ ಮಾತು ಹೇಳುವೆ. ಜನರು ಇಷ್ಟಪಟ್ಟು, ಮೆಚ್ಚಿಕೊಂಡರೆ ಅದೇ ದೊಡ್ಡದು. ಚಿತ್ರರಂಗದಲ್ಲಿ ಎಲ್ಲರಿಗೂ ಜನರು ಮೆಚ್ಚಬೇಕು. ಶಿವ ಪಾತ್ರ ಈ ರೇಂಜ್ ಗೆ ಜನರಿಗೆ ತಲುಪತ್ತದೆ ಎಂದು ನಾನು ಭಾವಿಸಿರಲಿಲ್ಲ. ಮೊದಲು ನನಗೆ ಶುಭಾಶಯ ತಿಳಿಸಿದ್ದೇ ನನ್ನ ಹೆಂಡ್ತಿ. ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು, ಎಲ್ಲವೂ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.
ನನ್ನ ಪತ್ನಿ ಹೇಳದಿದ್ದರೆ ನಾನು ಈ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಈ ಸಿನಿಮಾ ಮಾಡಲು ಮುಂದಾದಾಗ ನಾನು ಬೇರೆಯವರು ನಟಿಸಲಿ, ನಾನು ನಿರ್ದೇಶನ ಮಾಡುತ್ತೇನೆ ಅಂದಿದ್ದೆ. ಆದರೆ ನನ್ನ ಪತ್ನಿ ನೀನೇ ನಟಿಸಬೇಕು ಎಂದು ಪಟ್ಟು ಹಿಡಿದಿದ್ದರು. ಗರ್ಭಿಣಿಯಾಗಿದ್ದರೂ ನನ್ನ ಪತ್ನಿ ವಸ್ತ್ರ ವಿನ್ಯಾಸ ಮಾಡಿದ್ದಾಳೆ. ಈಗ ಮಗಳು ಮನೆಗೆ ಬಂದ ಮೇಲೆ ಅದೃಷ್ಟ ಮನೆಗೆ ಬಂದಂತಾಗಿದೆ ಎಂದು ಪತ್ನಿಯನ್ನು ಕೊಂಡಾಡಿದ್ದಾರೆ.