ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಅವರನ್ನು 2025ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ‘ಕಮ್ಬ್ಯಾಕ್ ಆಫ್ ದಿ ಇಯರ್’ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. 2022ರ ಡಿಸೆಂಬರ್ 30 ರಂದು ಭೀಕರ ಕಾರು ಅಪಘಾತ ನಡೆದು ಗಂಭೀರ ಗಾಯಗೊಂಡಿದ್ದ ಅವರು ಒಂದು ವರ್ಷದಲ್ಲೇ ಸುಧಾರಿಸಿಕೊಂಡು ಕ್ರಿಕೆಟ್ ಪಿಚ್ಗೆ ಮರಳಿದ್ದರು.
Rishabh Pant plays cricket today.pic.twitter.com/lczQhhxCdK
— Harsh (@harsh_spidey) March 4, 2025
ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಂತರ ಪ್ರತಿಷ್ಠಿತ ಲಾರೆಸ್ ಸ್ಪೋರ್ಟ್ಸ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲುವಿಗಾಗಿ ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ ಅವಾರ್ಡ್ (2000-2020) ಪ್ರಶಸ್ತಿಗೆ ಸಚಿನ್ ಭಾಜನರಾಗಿದ್ದರು.
ಬ್ರೆಜಿಲ್ ಜಿಮ್ನಾಸ್ಟ್ ರೆಬೆಕಾ ಆಂಡ್ರೇಡ್, ಅಮೆರಿಕದ ಈಜುಗಾರ ಕೇಲೆಬ್ ಡ್ರೆಸೆಲ್, ಸ್ವಿಸ್ ಸ್ಕೀ ರೇಸರ್ ಲಾರಾ ಗುಟ್-ಬೆಹ್ರಾಮಿ, ಸ್ಪ್ಯಾನಿಷ್ ಮೋಟಾರ್ಸೈಕಲ್ ರೇಸರ್ ಮಾರ್ಕ್ ಮಾರ್ಕ್ವೆಜ್ ಮತ್ತು ಆಸ್ಟ್ರೇಲಿಯಾದ ಈಜುಗಾರ ಅರಿಯಾರ್ನೆ ಟಿಟ್ಮುಶಾವ್ ಅವರೊಂದಿಗೆ ಪಂತ್ ನಾಮನಿರ್ದೇಶನಗೊಂಡಿದ್ದಾರೆ. ಪ್ರಶಸ್ತಿಗಳ ವಿಜೇತರನ್ನು ಏಪ್ರಿಲ್ 1, 2025 ರಂದು ಘೋಷಿಸಲಾಗುತ್ತದೆ.
2024ರ ಟಿ20 ವಿಶ್ವಕಪ್ ಗೆಲುವಿನ ಭಾಗವಾಗಿದ್ದ ಪಂತ್, ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದರು. ಐರ್ಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ನಲ್ಲಿ ಅಮೂಲ್ಯ ಕೊಡುಗೆಗಳನ್ನು ನೀಡಿದ್ದರು. ಪಂದ್ಯಾವಳಿಯ ಫೈನಲ್ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ನ 16 ನೇ ಓವರ್ ವೇಳೆ ಗಾಯಗೊಂಡಂತೆ ನಟಿಸಿ ತಂಡದ ಗೆಲುವಿಗೆ ನೆರವಾದ ಅವರ ಪ್ರಯತ್ನದ ಬಗ್ಗೆಯೂ ಚರ್ಚೆಗಳು ನಡೆದಿದ್ದವು.
ಇದನ್ನೂ ಓದಿ:Rishabh Pant : ಹಿರಿಯ ಆಟಗಾರರ ಟೀಕೆ; ರಣಜಿ ಕಡೆಗೆ ಹೊರಳಿದ ರಿಷಭ್ ಪಂತ್
20 ತಿಂಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಪುನರಾಗಮನದ ಶತಕ ಗಳಿಸಿದ್ದರು. ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧ 109 ರನ್ ಬಾರಿಸಿದ್ದರು. ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ 0-3 ವೈಟ್ವಾಶ್ ಸಮಯದಲ್ಲಿ ಅವರು ಆರು ಇನ್ನಿಂಗ್ಸ್ಗಳಲ್ಲಿ 43.50 ಸರಾಸರಿಯಲ್ಲಿ ಮೂರು ಅರ್ಧಶತಕಗಳೊಂದಿಗೆ 261 ರನ್ ಗಳಿಸಿದ್ದರು. ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್, ಪೋಲ್ ವಾಲ್ಟರ್ ಮೊಂಡೊ ಡುಪ್ಲಾಂಟಿಸ್ ಮತ್ತು ಮೋಟಾರ್ ಸ್ಪೋರ್ಟ್ಸ್ ರೇಸರ್ ಮ್ಯಾಕ್ಸ್ ವೆರ್ಸ್ಟಾಪೆನ್ ಅವರು ‘ವರ್ಷದ ಕ್ರೀಡಾಪಟು’ ಪ್ರಶಸ್ತಿಯನ್ನು ಗೆಲ್ಲುವ ಸ್ಪರ್ಧೆಯಲ್ಲಿದ್ದಾರೆ. ಮತ್ತೊಂದೆಡೆ, ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಮತ್ತು ಟೆನಿಸ್ ತಾರೆ ಆರಿನಾ ಸಬಲೆಂಕಾ ‘ವರ್ಷದ ಕ್ರೀಡಾಪಟು’ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಲ್ಲಿ ಸೇರಿದ್ದಾರೆ.