ಚಿಕ್ಕಮಗಳೂರು: ‘ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ವಿಸರ್ಜನೆ ವೇಳೆ ನಡೆದ ಗಲಾಟೆ ಮುಸ್ಲಿಮರ ಕಡೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಆಗಿದೆ. ಆದ್ದರಿಂದ ಹಿಂದೂಗಳನ್ನು ಬಂಧಿಸಿಲ್ಲ, ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ವರದಿಗಾರರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ, ’21 ಜನರನ್ನು ಬಂಧಿಸಲಾಗಿದೆ. ಕ್ರಮ ಆದರೂ ಬಿಜೆಪಿಯವರು ಸಭೆ ನಡೆಸಿದರೆ ಅರ್ಥವಿದೆಯೇ’ ಎಂದು ಪ್ರಶ್ನಿಸಿದರು.
‘ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ರಾಜ್ಯ ಬಿಜೆಪಿ ಮುಖಂಡರಿಗೆ ನಾಚಿಕೆಯಾಗಬೇಕು. ಅವರ ಆಡಳಿತದಲ್ಲಿ ಈ ರೀತಿ ಘಟನೆಗಳು ನಡೆದಿಲ್ಲವೇ? ಕಾಂಗ್ರೆಸ್ ಅಧಿಕಾರದಲ್ಲೇ ಗಲಭೆಯಾಗುತ್ತದೆ ಎಂಬುದು ಸುಳ್ಳು. ಒಮ್ಮೆ ಹಿಂದೆ ತಿರುಗಿ ನೋಡಲಿ’ ಎಂದರು.
“ಸ್ವಲ್ಪ ಭದ್ರತಾ ವೈಫಲ್ಯ ಆಗಿರುವ ಅನುಮಾನ ಇದೆ. ಈ ಗಲಭೆ ಹಿಂದೆ ಯಾರಿದ್ದಾರೆ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ’ ಎಂದರು.
‘ನನಗಿರುವ ಮಾಹಿತಿ ಪ್ರಕಾರ ಸಾಮೂಹಿಕ ಗಣಪತಿ ಮೆರವಣಿಗೆಗೆ ನಾಲೈದು ಗಣಪತಿಗಳು ಮಾತ್ರ ಇದ್ದವು. ಬೆಂಗಳೂರಿನಿಂದ ಖರೀದಿ ಮಾಡಿ ತಂದು ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಪ್ರಯತ್ನವನ್ನು ಬಿಜೆಪಿ-ಜೆಡಿಎಸ್‌ನವರು ಮಾಡಿದರು’ ಎಂದರು.



















