ಲಕ್ನೋ: ಭಾರತೀಯ ಕ್ರಿಕೆಟ್ ತಂಡದ ಟಿ20 ಆಟಗಾರ ರಿಂಕು ಸಿಂಗ್ ಸಮಾಜವಾದಿ ಪಕ್ಷದ ಸಂಸದೆಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.
ಸಂಸದೆ ಪ್ರಿಯಾ ಸರೋಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ.
ಆದರೆ, ಸಂಸದೆ ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಈ ಕುರಿತು ಪ್ರತಿಕ್ರಿಯಿಸಿ, ರಿಂಕು ಕುಟುಂಬ ಮದುವೆ ಪ್ರಸ್ತಾಪ ಕಳುಹಿಸಿದೆ. ಆ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಆದರೆ, ಇದುವರೆಗೂ ರಿಂಕು ಸಿಂಗ್(Rinku Singh) ಹಾಗೂ ಸಂಸದೆ ಪ್ರಿಯಾ ಸರೋಜ್(Priya Saroj) ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ರಿಂಕು ಸಿಂಗ್ ಭಾರತೀಯ ಕ್ರಿಕೆಟ್ ತಂಡದ ಟಿ20 ತಂಡದ ಸದಸ್ಯರಾಗಿದ್ದಾರೆ. ಪ್ರಿಯಾ ಅವರು ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದ ಸಂಸದೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿಪಿ ಸರೋಜ್ ವಿರುದ್ಧ 35 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದಾರೆ ಮತ್ತು ಹಾಲಿ ಕೆರಕಟ್ ಕ್ಷೇತ್ರದ ಶಾಸಕರಾಗಿದ್ದಾರೆ.