ವಿಶಾಖಪಟ್ಟಣಂ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಅವರು ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನ್ನಿಂಗ್ಸ್ ಆಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ, ಭಾರತ ತಂಡವು 102 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದಾಗ ಕ್ರೀಸ್‌ಗೆ ಬಂದ ರಿಚಾ, ಕೇವಲ 77 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಈ ಸ್ಪೋಟಕ ಇನ್ನಿಂಗ್ಸ್ ಮೂಲಕ ಅವರು ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಕುಸಿತದ ಸುಳಿಯಿಂದ ತಂಡವನ್ನು ಪಾರು ಮಾಡಿದ ರಿಚಾ
ಗುರುವಾರ ವಿಶಾಖಪಟ್ಟಣಂನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭವೇನೋ ಸಿಕ್ಕಿತ್ತು. ಆರಂಭಿಕರಾದ ಪ್ರತಿಕಾ ರಾವಲ್ (37) ಮತ್ತು ಸ್ಮೃತಿ ಮಂಧಾನಾ (23) ಮೊದಲ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವಾಡಿದರು. ಆದರೆ, ಮಂಧಾನಾ ಔಟಾದ ಬಳಿಕ ಭಾರತದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಕೇವಲ 19 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡ ಭಾರತ, 102 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡವು 150 ರನ್‌ಗಳ ಗಡಿ ದಾಟುವುದೂ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿತ್ತು.
ಸ್ಪೋಟಕ ಬ್ಯಾಟಿಂಗ್ ಮತ್ತು ದಾಖಲೆಯ ಜೊತೆಯಾಟ
ಈ ಹಂತದಲ್ಲಿ ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಚಾ ಘೋಷ್, ತಮ್ಮ ಹೆಗಲ ಮೇಲೆ ಜವಾಬ್ದಾರಿಯನ್ನು ಹೊತ್ತುಕೊಂಡರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರೂ, ನಂತರ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ಕೇವಲ 77 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ಗಳು ಮತ್ತು 11 ಬೌಂಡರಿಗಳೊಂದಿಗೆ 94 ರನ್ ಚಚ್ಚಿದ ಅವರು, ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ವಿಶೇಷವಾಗಿ, ಎಂಟನೇ ವಿಕೆಟ್‌ಗೆ ಸ್ನೇಹಾ ರಾಣಾ (33) ಅವರೊಂದಿಗೆ ಕೇವಲ 53 ಎಸೆತಗಳಲ್ಲಿ 88 ರನ್‌ಗಳ ಸ್ಫೋಟಕ ಜೊತೆಯಾಟವಾಡಿ, ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು.
ಹೊಸ ವಿಶ್ವದಾಖಲೆ ಬರೆದ ರಿಚಾ ಘೋಷ್
ಈ ಅಮೋಘ ಇನ್ನಿಂಗ್ಸ್ ಮೂಲಕ ರಿಚಾ ಘೋಷ್, ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ನಿರ್ಮಿಸಿದರು. ವಿಶ್ವಕಪ್ ಪಂದ್ಯವೊಂದರಲ್ಲಿ ಎಂಟನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಕೀರ್ತಿಗೆ ಅವರು ಪಾತ್ರರಾದರು. ಈ ಮೂಲಕ, 2022ರ ವಿಶ್ವಕಪ್‌ನಲ್ಲಿ 67 ರನ್ ಗಳಿಸಿದ್ದ ಭಾರತದವರೇ ಆದ ಪೂಜಾ ವಸ್ತ್ರಾಕರ್ ಅವರ ದಾಖಲೆಯನ್ನು ಅವರು ಮುರಿದರು. ಅಷ್ಟೇ ಅಲ್ಲದೆ, ಮಹಿಳಾ ಮತ್ತು ಪುರುಷರ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 8ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕೇವಲ 6 ರನ್‌ಗಳ ಅಂತರದಲ್ಲಿ ಚೊಚ್ಚಲ ಶತಕದಿಂದ ವಂಚಿತರಾದರೂ, ಅವರ ಈ ಇನ್ನಿಂಗ್ಸ್ ಭಾರತ ತಂಡಕ್ಕೆ ಸಂಜೀವಿನಿಯಾಯಿತು