ಬೆಂಗಳೂರು : ಈ ಕ್ಷೇತ್ರದ ಶಾಸಕರು, ಕಂದಾಯ ಮಂತ್ರಿಗಳು ಮೂರು ಗ್ರಾಮಗಳ ಸರ್ವೆ ನಂಬರ್ ನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಸ್ಮಶಾನ ಜಾಗವನ್ನು ಕೂಡ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು ಕಂದಾಯ ಇಲಾಖೆಯ ಸಚಿವರಾದ ಕೃಷ್ಣಬೈರೇಗೌಡ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ತಮ್ಮೇಶ್ ಗೌಡ, ಮಂತ್ರಿಗಳು ಇಡೀ ರಾಜ್ಯದಲ್ಲಿ ಭಾಷಣವನ್ನು ಮಾಡುತ್ತಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾಧ್ಯಮದಲ್ಲಿ ಬರುವ ರೀತಿ ಮಾಡುತ್ತಾರೆ. 18 ವರ್ಷಗಳಿಂದ ಇಲ್ಲಿ ಶಾಸಕರಾಗಿ, ಅಧಿಕಾರಿಗಳಿಗೆ ಕುಮ್ಮಕ್ಕು ಕೊಡುತ್ತಿದ್ದೀರಿ ಎಂದು ಸಚಿವ ಬೈರೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರಿ ಜಾಗದ ಒತ್ತುವರಿಯಲ್ಲಿ ಶಾಸಕರ ಕೈವಾಡ ಇದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಶಾಸಕರ ಸಹೋದರನನ್ನು ಬಿಟ್ಟು ವ್ಯವಹಾರ ಮಾಡಿಸುತ್ತಿದ್ದಾರೆ. ಶಾಸಕರೇ ರಿಯಲ್ ಎಸ್ಟೇಟ್ ನಡೆಸುತ್ತಿದ್ದಾರೆ. ಕೋಗಿಲು ಬಡಾವಣೆಯ ಒತ್ತುವರಿ ತೆರವು ಗೊಳಿಸಿ ಎಂದು ಪ್ರತಿಭಟನೆ ಮಾಡಲು ಮುಂದಾದರೆ ಬಂಧನ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕ್ಷೇತ್ರದ ಸರ್ಕಾರಿ ಜಾಗವನ್ನು ಉಳಿಸಲು ನಿಮಗೆ ಯೋಗ್ಯತೆ ಇಲ್ಲದಿದ್ದರೆ ನೀವು ಅಯೋಗ್ಯರು. ತಕ್ಷಣ ಅಧಿಕಾರಿಗಳನ್ನು ಕರೆಸಿ, ಸರ್ಕಾರಿ ಜಾಗವನ್ನು ಉಳಿಸುವ ಕೆಲಸ ಮಾಡಿ ಎಂದು ಒತ್ತಾಯಿಸಿದ್ದಾರೆ.


















