ಮೈಸೂರು: ದೇವೇಗೌಡರು, ಕುಮಾರಸ್ವಾಮಿ (H.D Kumaraswamy) ಸೇರಿದಂತೆ ಅವರ ಕಟುಂಬಕ್ಕೆ ಸೇಡಿನ ರಾಜಕಾರಣ ಇರುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ (Mysuru) ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನೊಬ್ಬರು ಅಧಿಕಾರ ಮಾಡುವುದನ್ನು ಕುಮಾರಸ್ವಾಮಿ, ದೇವೇಗೌಡರು ಎಂದಿಗೂ ಸಹಿಸುವುದಿಲ್ಲ. ಈಗ ನಮ್ಮ ಸರ್ಕಾರ ಅಸ್ಥಿರ ಮಾಡಲು ದೇವೇಗೌಡರು ಬಿಜೆಪಿಯೊಂದಿಗೆ ಸೇರಿ ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಕೋಮುವಾದಿ, ಜಾತಿವಾದಿ, ಪಾಳೇಗಾರಿಕೆ ಪ್ರವೃತ್ತಿ ಇರೋರನ್ನು ರಾಜಕೀಯದಿಂದ ಓಡಿಸಬೇಕು. ಮನುವಾದಿಗಳು, ಜಾತಿವಾದಿಗಳು, ಶೋಷಿತರು ಅಧಿಕಾರ ಮಾಡುವುದನ್ನು ಸಹಿಸಲ್ಲ. ದೇವರಾಜ ಅರಸು, ಬಂಗಾರಪ್ಪ, ಮೋಯ್ಲಿ ಅವರಿಗೆ ಇದೇ ಗತಿ ಆಗಿತ್ತು. ಧರ್ಮಸಿಂಗ್ ಅವರಿಗೆ ಕೊಟ್ಟ ಮಾತು ತಪ್ಪಿದ್ದರು. ಬಿಜೆಪಿ ಜೊತೆ ಅಧಿಕಾರ ಮಾಡಿದ್ದರು. ಈ ಮನಸ್ಥಿತಿಯನ್ನು ವಿರೋಧಿಸಲು ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
2006ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಎಂದು ದೇವೇಗೌಡರು ಹೇಳಿದ್ದರು. ಈಗ ಕೋಮುವಾದಿಗಳ ಜೊತೆ ಸೇರಿ ಷಡ್ಯಂತ್ರ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು ಕೆಡವಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾನು 4 ದಶಕಗಳಿಂದ ರಾಜಕೀಯದಲ್ಲಿ ಇದ್ದೇನೆ. ಅನೇಕ ಖಾತೆಗಳನ್ನು ನಿರ್ವಹಿಸಿದ್ದೇನೆ. ಜನರ ಆಶೀರ್ವಾದದ ಫಲದಿಂದ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದೇನೆ. ಆದರೆ, ಇದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಗುಡುಗಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಆದೇಶ ಇಲ್ಲ. ನನ್ನ ಪತ್ರ ಇಲ್ಲ. ಆದರೂ ನನ್ನ ರಾಜೀನಾಮೆ ಕೇಳುತ್ತಾರೆ. ಅಶೋಕ್, ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿಗೆ ಯಾವ ನೈತಿಕತೆ ಇದೆ? ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಕೀಯದಿಂದ ನಿವೃತ್ತಿಯಾಗಬೇಕಿತ್ತು. 82 ವರ್ಷ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಮಾಡಿ ಪೋಕ್ಸೋ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಂಥವರು ನನ್ನ ರಾಜೀನಾಮೆ ಕೇಳುತ್ತಾರೆ. ಮಿಸ್ಟರ್ ಯಡಿಯೂರಪ್ಪ ಮೇಲೆ ಸುಮಾರು 20ರಷ್ಟು ಪ್ರಕರಣಗಳು ಇವೆ. ವಿಜಯೇಂದ್ರನ ಮೇಲೆ ಸಾಕಷ್ಟು ಕೇಸ್ ಗಳಿವೆ. ಅವರದೇ ಪಕ್ಷದ ಯತ್ನಾಳ್ ಈ ಬಗ್ಗೆ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ನನಗೆ ಆಸ್ತಿ ವ್ಯಾಮೋಹ ಇದ್ದಿದ್ದರೆ ಕೋಟಿಗಟ್ಟಲೆ ಹಣ ಮಾಡಬಹುದಿತ್ತು. ಮೊನ್ನೆ ಮೊನ್ನೆವರೆಗೂ ಮೈಸೂರಿನಲ್ಲಿ ಮನೆ ಇರಲಿಲ್ಲ. ಈಗ ಮನೆ ಕಟ್ಟುತ್ತಿದ್ದೇನೆ. ಎರಡು ಮನೆ ಕಟ್ಟಿ, ಅದರ ಸಾಲ ತೀರಿಸಲು ಮನೆಯನ್ನೇ ಮಾರಿ ಬಿಟ್ಟೆ. 30 ಲಕ್ಷ ರೂ. ಬ್ಯಾಂಕ್ ಸಾಲ ಕಟ್ಟಲು ಆಗದೆ ಮನೆ ಮಾರಿದ್ದೇನೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಒಂದೇ ಒಂದು ಸೈಟ್ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ನಾನು ರಾಜಕೀಯ ಪ್ರಾರಂಭ ಮಾಡಿದ್ದು ಜಿರೋದಿಂದ. ನನ್ನ ಮೊದಲ ಚುನಾವಣೆಗೆ ಠೇವಣಿ ಕಟ್ಟಲು ಒಂದು ರೂಪಾಯಿ ಇರಲಿಲ್ಲ. ಆಗ ಕೋರ್ಟ್‍ನಲ್ಲಿ ಲಾಯರ್ ಕೆಲಸ ಮಾಡುತ್ತಿದ್ದೆ. ನಮ್ಮ ಆಫೀಸ್ ಕ್ಲರ್ಕ್ 250 ರೂ. ಠೇವಣಿ ಕೊಟ್ಟಿದ್ದ. ಚುನಾವಣೆಗೆ ಜನರೇ ದುಡ್ಡು ಕೊಟ್ಟು ಗೆಲ್ಲಿಸಿದ್ದರು. ಈಗ 9 ಚುನಾವಣೆಗಳಲ್ಲಿ ಜನರೇ ನನ್ನನ್ನು ಗೆಲ್ಲಿಸಿದ್ದಾರೆ. ಎರಡು ಬಾರಿ ಸಿಎಂ ಮಾಡಿದ್ದಾರೆ ಎಂದು ಹೇಳಿದ್ದಾರೆ.