ದರ್ಭಾಂಗ (ಬಿಹಾರ): ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಗಳ ಕಣ್ಣೆದುರೇ ಅಳಿಯನನ್ನು ಆತನ ಮಾವ ಗುಂಡಿಕ್ಕಿ ಹತ್ಯೆಗೈದ ಮನಕಲಕುವ ಘಟನೆ ಬಿಹಾರದ ದರ್ಭಾಂಗದಲ್ಲಿ ನಡೆದಿದೆ. ಈ ಘಟನೆಯು ರಾಜ್ಯದಲ್ಲಿ ಮರ್ಯಾದಾ ಹತ್ಯೆಯ ಭೀಕರತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ದರ್ಭಾಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿಎಸ್ಸಿ (ನರ್ಸಿಂಗ್) ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ 25 ವರ್ಷದ ರಾಹುಲ್ ಕುಮಾರ್ ಕೊಲೆಯಾದ ಯುವಕ. ರಾಹುಲ್ ಅವರ ಪತ್ನಿ ತನು ಪ್ರಿಯಾ ಕೂಡ ಇದೇ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಆಕೆಯ ತಂದೆ ಪ್ರೇಮಶಂಕರ್ ಝಾ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ರಾಹುಲ್ ಮತ್ತು ತನು ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಮತ್ತು ಹಾಸ್ಟೆಲ್‌ನ ಬೇರೆ ಬೇರೆ ಮಹಡಿಗಳಲ್ಲಿ ವಾಸಿಸುತ್ತಿದ್ದರು. ನಿನ್ನೆ ಸಂಜೆ, ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್ ಬಳಿ ಬರುವುದನ್ನು ತನು ನೋಡಿದ್ದಾರೆ. ಹತ್ತಿರ ಬಂದಾಗ ಅದು ತನ್ನ ತಂದೆ ಪ್ರೇಮಶಂಕರ್ ಝಾ ಎಂದು ಗೊತ್ತಾಗಿದೆ.
“ಅವರ ಕೈಯಲ್ಲಿ ಗನ್ ಇತ್ತು. ಅವರು ನನ್ನ ಅಪ್ಪ ಪ್ರೇಮಶಂಕರ್ ಝಾ ಎಂದು ನನಗೆ ಹತ್ತಿರ ಬಂದಾಗ ತಿಳಿಯಿತು. ಅವರು ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಪತಿ ನನ್ನ ಮಡಿಲಿಗೆ ಬಿದ್ದರು,” ಎಂದು ತನು ಕಣ್ಣೀರು ಹಾಕಿದ್ದಾರೆ. ಈ ಸಂಚಿನಲ್ಲಿ ನನ್ನ ಇಡೀ ಕುಟುಂಬ ಭಾಗಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. “ನನ್ನ ತಂದೆ ಮತ್ತು ಸಹೋದರರಿಂದ ನನಗಾಗಲಿ ಅಥವಾ ನನ್ನ ಪತಿಗಾಗಲಿ ಅಪಾಯವಿದೆ ಎಂದು ನಾವು ಈ ಹಿಂದೆಯೇ ನ್ಯಾಯಾಲಯದ ಮೊರೆ ಹೋಗಿದ್ದೆವು,” ಎಂದು ಅವರು ತಿಳಿಸಿದ್ದಾರೆ.
ಗುಂಡಿನ ದಾಳಿಯ ನಂತರ, ರಾಹುಲ್ ಅವರ ಸ್ನೇಹಿತರು ಮತ್ತು ಇತರ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರೇಮಶಂಕರ್ ಝಾ ಅವರನ್ನು ಹಿಡಿದು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಕ್ಕೆ ಕಳುಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಆಸ್ಪತ್ರೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಹುಲ್‌ಗೆ ನ್ಯಾಯಕ್ಕಾಗಿ ಆಗ್ರಹಿಸಿದ ವಿದ್ಯಾರ್ಥಿಗಳ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ದರ್ಭಾಂಗ ಜಿಲ್ಲಾಧಿಕಾರಿ ಕೌಶಲ್ ಕುಮಾರ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೆಡ್ಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. “ಪ್ರೇಮ ವಿವಾಹವಾಗಿದ್ದ ವಿದ್ಯಾರ್ಥಿಯನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆರೋಪಿಗೆ ಚಿಕಿತ್ಸೆ ನೀಡಲು ವಿದ್ಯಾರ್ಥಿಗಳು ಅಡ್ಡಿಪಡಿಸಿದ್ದರಿಂದ ಆಸ್ಪತ್ರೆಯಲ್ಲಿ ಗೊಂದಲ ಉಂಟಾಗಿತ್ತು. ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಎಸ್ಎಸ್ಪಿ ಜಗನ್ನಾಥ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ