ನವದೆಹಲಿ: ತನ್ನ ಯಜಮಾನನಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು, ಚಾಲಕನೊಬ್ಬ ಯಜಮಾನನ ಐದು ವರ್ಷದ ಮಗನನ್ನೇ ಅಪಹರಿಸಿ, ಇಟ್ಟಿಗೆ ಮತ್ತು ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ದೆಹಲಿಯ ನರೇಲಾ ಪ್ರದೇಶದಲ್ಲಿ ನಡೆದಿದೆ. ಆರೋಪಿ ಚಾಲಕನ ಬಾಡಿಗೆ ಕೋಣೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ಏಕಾಏಕಿ ನಾಪತ್ತೆಯಾಗಿದ್ದನು. ಕುಟುಂಬಸ್ಥರು ಮತ್ತು ನೆರೆಹೊರೆಯವರು ಹುಡುಕಾಟ ನಡೆಸಿದಾಗ, ಸಮೀಪದಲ್ಲೇ ವಾಸವಿದ್ದ ಆರೋಪಿ ಚಾಲಕ ನಿತು ಎಂಬಾತನ ಕೋಣೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಕಾರಣವೇನು?
ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕನ ತಂದೆ ಸಾರಿಗೆ ಉದ್ಯಮಿಯಾಗಿದ್ದು, ಏಳರಿಂದ ಎಂಟು ವಾಹನಗಳನ್ನು ಹೊಂದಿದ್ದರು. ಅವರ ಬಳಿ ನೀತು ಮತ್ತು ವಾಸಿಂ ಎಂಬ ಇಬ್ಬರು ಚಾಲಕರು ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ, ಇಬ್ಬರೂ ಚಾಲಕರು ಮದ್ಯದ ಅಮಲಿನಲ್ಲಿ ಜಗಳವಾಡಿದ್ದು, ಈ ವೇಳೆ ನೀತು, ವಾಸಿಂ ಮೇಲೆ ಹಲ್ಲೆ ನಡೆಸಿದ್ದ. ಈ ವಿಷಯವನ್ನು ಯಜಮಾನನ ಗಮನಕ್ಕೆ ತಂದಾಗ, ಅವರು ನೀತುವನ್ನು ಕರೆದಿದ್ದಲ್ಲದೆ ಕೆಟ್ಟದಾಗಿ ವರ್ತಿಸಿದ್ದಕ್ಕಾಗಿ ನಾಲ್ಕೈದು ಬಾರಿ ಕಪಾಳಮೋಕ್ಷ ಮಾಡಿದ್ದರು.
ಈ ಘಟನೆಯಿಂದ ಅವಮಾನಿತನಾದ ನೀತು, ಮಾಲೀಕನ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಅದರಂತೆ, ಮಂಗಳವಾರ ಮನೆಯ ಮುಂದೆ ಆಟವಾಡುತ್ತಿದ್ದ ಮಾಲೀಕನ 5 ವರ್ಷದ ಪುತ್ರನನ್ನು ಅಪಹರಿಸಿ ತನ್ನ ಕೋಣೆಗೆ ಕರೆದೊಯ್ದು, ಇಟ್ಟಿಗೆಯಿಂದ ಜಜ್ಜಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ಹರೇಶ್ವರ್ ಸ್ವಾಮಿ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸದ್ಯ ಆರೋಪಿ ನೀತು ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಕಣ್ಗಾವಲು ಮೂಲಕ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.