ಬೆಂಗಳೂರು: ಇತ್ತೀಚೆಗೆ ರಸ್ತೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಮಕ್ಕಳು ಸೇರಿದಂತೆ ಅಸಹಾಯಕರು ಕಂಡರೆ ಸಾಕು ಬೀದಿ ನಾಯಿಗಳು (stray dogs) ದಾಳಿ ಮಾಡಿ ಹರಿದು ತಿನ್ನುತ್ತಿವೆ. ಈಗ ವಾಕಿಂಗ್ ಗೆ ಹೋದೆ ವೃದ್ಧೆಯನ್ನು ನಾಯಿಗಳು ಬಲಿ ಪಡೆದಿರುವ ಘಟನೆ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿಯ ವಾಯುಸೇನಾ ನೆಲೆಯ 7ನೇ ವಸತಿಗೃಹ ಕ್ಯಾಂಪಸ್ ನಲ್ಲಿ ವಾಕಿಂಗ್ ಗೆ ಹೋಗಿದ್ದ ನಿವೃತ್ತ ಶಿಕ್ಷಕಿಯ ಮೇಲೆಯೇ ನಾಯಿಗಳು ದಾಳಿ ನಡೆಸಿವೆ. ಘಟನೆಯಲ್ಲಿ ರಾಜ್ದುಲಾರಿ ಸಿನ್ಹಾ(76) ಸಾವನ್ನಪ್ಪಿದ್ದಾರೆ. ವೃದ್ಧೆಯ ಮೇಲೆ ಸುಮಾರು 10 ರಿಂದ 12 ಬೀದಿ ನಾಯಿಗಳು ದಾಳಿ ನಡೆಸಿವೆ ಎನ್ನಲಾಗಿದೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ರಾಜ್ದುಲಾರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
ಇತ್ತೀಚೆಗೆ ನಾಯಿಕ ಕಡಿತಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ. 2020-21ರಲ್ಲಿ 18,629 ಜನ ನಾಯಿ ಕಡಿತಕ್ಕೆ ತುತ್ತಾಗಿದ್ದರು. 2022-23ರಲ್ಲಿ ಈ ಸಂಖ್ಯೆ 19,770ಕ್ಕೆ ಏರಿಕೆ ಕಂಡಿತ್ತು. ಬೀದಿ ನಾಯಿಗಳು ಅಷ್ಟೇ ಅಲ್ಲದೇ, ಸಾಕು ನಾಯಿಗಳು ಕಡಿತಕ್ಕೂ ತುತ್ತಾದ ಕೆಲ ಪ್ರಕರಣಗಳು ನಡೆದಿವೆ.
ಸಿಲಿಕಾನ್ ಸಿಟಿಯಲ್ಲಿ 3.10 ಲಕ್ಷ ಬೀದಿ ನಾಯಿಗಳಿದ್ದವು. ಸದ್ಯ 2,79,335 ಶ್ವಾನಗಳಿವೆ. ಈ ಪೈಕಿ 1,65,341 ಗಂಡು ಹಾಗೂ 82,757 ಹೆಣ್ಣು ನಾಯಿಗಳಿವೆ. ಸುಮಾರು ಒಂದು ಲಕ್ಷ ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್ ಕೂಡ ಹಾಕಿಸಲಾಗಿದೆ ಎಂದು ಪಾಲಿಕೆ ಹೇಳಿದೆ, ಆದರೆ, ಪ್ರತಿ ದಿನ ಸುಮಾರು 60ಕ್ಕೂ ಅಧಿಕ ನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತಿವೆ.