ಗಾಜಿಯಾಬಾದ್ (ಉತ್ತರ ಪ್ರದೇಶ): ಎಂತಹ ರಕ್ತ ಸಂಬಂಧಕ್ಕಾದರೂ ಆಸ್ತಿ, ಹಣದಾಸೆ ಕೊಡಲಿಯೇಟು ನೀಡಬಲ್ಲದು ಎಂಬುದಕ್ಕೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ಮಕ್ಕಳನ್ನು ಮನೆ ಖಾಲಿ ಮಾಡುವಂತೆ ಸೂಚಿಸಿದ ಕಾರಣಕ್ಕೆ, ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರನ್ನು ಸ್ವತಃ ಅವರ ಮಕ್ಕಳೇ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾರೆ.
ಘಟನೆ ನಡೆದು ಐದು ದಿನಗಳ ನಂತರ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಹೆತ್ತ ತಂದೆಯ ಕೊಲೆಗೆ ಮಕ್ಕಳೇ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸತ್ಯವನ್ನು ಬಯಲಿಗೆಳೆದಿದ್ದಾರೆ.
ಮೃತರನ್ನು ಯೋಗೇಶ್ ಕುಮಾರ್ (58) ಎಂದು ಗುರುತಿಸಲಾಗಿದೆ. ಇವರು ಭಾರತೀಯ ವಾಯುಪಡೆಯ ನಿವೃತ್ತ ಉದ್ಯೋಗಿಯಾಗಿದ್ದು, ಉತ್ತರ ಪ್ರದೇಶದ ಬಾಗ್‌ಪತ್ ಮೂಲದವರು. ಡಿಸೆಂಬರ್ 26ರಂದು ಯೋಗೇಶ್ ಅವರು ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಲ್ಲದೆ, ಕಬ್ಬಿಣದ ರಾಡ್‌ನಿಂದಲೂ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮನೆ ಖಾಲಿ ಮಾಡಿದ್ದೇ ತಪ್ಪಾಯ್ತು:
ಪೊಲೀಸರ ತನಿಖೆಯ ಪ್ರಕಾರ, ಯೋಗೇಶ್ ಕುಮಾರ್ ಅವರು ತಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ತಮ್ಮ ಇಬ್ಬರು ಗಂಡು ಮಕ್ಕಳಾದ ನಿತೇಶ್ ಮತ್ತು ಗುಡ್ಡು ಅವರಿಗೆ ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಕೆರಳಿದ ಮಕ್ಕಳು ತಂದೆಯನ್ನೇ ಮುಗಿಸಲು ಸಂಚು ರೂಪಿಸಿದ್ದಾರೆ. ಇದಕ್ಕಾಗಿ ತಮ್ಮ ಮನೆಯ ಪಕ್ಕದ ನಿವಾಸಿ ಅರವಿಂದ್ ಕುಮಾರ್ (32) ಎಂಬಾತನಿಗೆ 5 ಲಕ್ಷ ರೂ. ಸುಪಾರಿ (ಗುತ್ತಿಗೆ) ನೀಡಿದ್ದರು.
ಸುಪಾರಿ ಪಡೆದ ಅರವಿಂದ್, ಕೌಶಂಬಿ ಜಿಲ್ಲೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ತನ್ನ ಭಾವ ನವೀನ್ ಎಂಬುವವನ ಜೊತೆಗೂಡಿ ಈ ಕೃತ್ಯ ಎಸಗಿದ್ದಾನೆ.
ಆರೋಪಿ ಅರವಿಂದ್ ಬಂಧನ:
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪಾರಿ ಕಿಲ್ಲರ್ ಅರವಿಂದ್‌ನನ್ನು ಬುಧವಾರ ಬಂಧಿಸಿದ್ದು, ನ್ಯಾಯಾಲಯವು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯಿಂದ ಹತ್ಯೆಗೆ ಬಳಸಿದ ಪಿಸ್ತೂಲು, ಜೀವಂತ ಗುಂಡುಗಳು, ಹಲ್ಲೆಗೆ ಬಳಸಿದ ಕಬ್ಬಿಣದ ಪೈಪ್ ಮತ್ತು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮೃತ ಅಧಿಕಾರಿಯ ಮಕ್ಕಳಾದ ನಿತೇಶ್, ಗುಡ್ಡು ಮತ್ತು ಕೃತ್ಯದಲ್ಲಿ ಭಾಗಿಯಾದ ಪೊಲೀಸ್ ಕಾನ್‌ಸ್ಟೇಬಲ್ ನವೀನ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ. ಲೋನಿ ಎಸಿಪಿ ಸಿದ್ಧಾರ್ಥ್ ಗೌತಮ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ; ನಾಸಾದ ಅತಿದೊಡ್ಡ ಗ್ರಂಥಾಲಯ ಶಾಶ್ವತ ಬಂದ್ | ಪುಸ್ತಕಗಳು ಗುಜಿರಿಗೆ!



















