ಬೆಂಗಳೂರು | ನಗರದ ಹೊಸ ಬೈಯ್ಯಪ್ಪನಹಳ್ಳಿ ಬಡಾವಣೆಯ ದೇವಸ್ಥಾನದ ರಸ್ತೆಯಲ್ಲಿರುವ ಮದ್ಯದಂಗಡಿಯನ್ನು ಮುಚ್ಚಿಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ದಿನಾಂಕ 14.12.2025ರಂದು ನಾನು ಬೆಂಗಳೂರಿನ ಹೊಸ ಬೈಯಪ್ಪನಹಳ್ಳಿ ಬಡಾವಣೆಗೆ ಖುದ್ದು ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ವೇಳೆ ಸಾರ್ವಜನಿಕರು ಹಲವಾರು ಸಮಸ್ಯೆಗಳು ಎದುರಿಸುತ್ತಿರುವುದು ಕಂಡುಬಂದಿದೆ.

ಪ್ರಮುಖವಾಗಿ ಶ್ರೀರಾಮ ದೇವಸ್ಥಾನ ಇರುವ ಬಡಾವಣೆಯ ಮುಖ್ಯ ರಸ್ತೆಯಲ್ಲೇ ಮದ್ಯದಂಗಡಿಯು ಕಾರ್ಯನಿರ್ವಹಿಸುತ್ತಿದೆ. ಇದೇ ಮಾರ್ಗದ ಮೂಲಕ ಅಲ್ಲಿನ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವೃದ್ಧರು ತಮ್ಮ ಮಕ್ಕಳನ್ನು ಶಾಲೆಗೆ ಹಾಗೂ ದಿನನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡಬೇಕಾಗಿರುವುದರಿಂದ ಮದ್ಯಪಾನ ಮಾಡಿದವರು ಹೆಣ್ಣುಮಕ್ಕಳಿಗೆ ತೊಂದರೆ ನೀಡುತ್ತಿದ್ದು, ಓಡಾಡಲು ತುಂಬಾ ತೊಂದರೆಯಾಗುತ್ತಿರುತ್ತದೆ ಎಂದು ಮಹಿಳೆಯರು ತಿಳಿಸಿದ್ದಾರೆ.
ಹೀಗಾಗಿ ಶೀಘ್ರವಾಗಿ ಮದ್ಯದಂಗಡಿಗಳಿಗೆ ನೀಡಿರುವ ಅನುಮತಿಯನ್ನು ಮರು ಪರಿಶೀಲಿಸಿ ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅಥವಾ ಮುಚ್ಚಲು ಕ್ರಮ ವಹಿಸಿ, ಈ ಬಡಾವಣೆಯ ಹೆಣ್ಣುಮಕ್ಕಳು, ಮಹಿಳೆಯರ ಗುಣಮಟ್ಟದ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡುವಂತೆ ನಾಗಲಕ್ಷ್ಮೀ ಚೌಧರಿ ಅವರು ಮನವಿ ಮಾಡಿದ್ದಾರೆ. ಹಾಗೆಯೇ ಈ ಸಂಬಂಧ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಹೊಸ ಬೈಯ್ಯಪ್ಪನಹಳ್ಳಿ ಬಡಾವಣೆ ಹೆಣ್ಣುಮಕ್ಕಳಿಗೆ ಶೀಘ್ರ ಮೂಲಭೂತ ಸೌಲಭ್ಯ ಒದಗಿಸಿ | GBA ಆಯುಕ್ತರಿಗೆ ನಾಗಲಕ್ಷ್ಮೀ ಚೌಧರಿ ಪತ್ರ



















