ಮುಲ್ಲನ್‌ಪುರ (ಪಂಜಾಬ್): ಗುರುವಾರ, ಮುಲ್ಲನ್‌ಪುರದ ಹೊಚ್ಚಹೊಸ ‘ಮಹಾರಾಜ ಯಡವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ’ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಕ್ರೀಡಾಂಗಣದಲ್ಲಿ ಮೊದಲ ಪುರುಷರ ಅಂತಾರಾಷ್ಟ್ರೀಯ ಪಂದ್ಯ (ಭಾರತ vs ದಕ್ಷಿಣ ಆಫ್ರಿಕಾ 2ನೇ ಟಿ20) ಆಯೋಜನೆಗೊಂಡಿದ್ದು ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಿಗೆ ವಿಶೇಷ ಗೌರವವನ್ನೂ ಸಲ್ಲಿಸಲಾಯಿತು.
ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಮತ್ತು ಮಹಿಳಾ ವಿಶ್ವಕಪ್ ವಿಜೇತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಹೆಸರಿನಲ್ಲಿ ಎರಡು ಸ್ಟ್ಯಾಂಡ್‌ಗಳನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉದ್ಘಾಟಿಸಿದರು. ಈ ಮೂಲಕ ಪಂಜಾಬ್‌ನ ಈ ಇಬ್ಬರು ಕ್ರಿಕೆಟ್ ರತ್ನಗಳಿಗೆ ತವರಿನಲ್ಲೇ ಶಾಶ್ವತ ಗೌರವ ಸಂದಾಯವಾಯಿತು.
ತಂಡದ ಜೊತೆ ಯುವರಾಜ್: ಗಂಭೀರ್ ಭೇಟಿ
ಸ್ಟ್ಯಾಂಡ್ ಉದ್ಘಾಟನೆ ಬಳಿಕ, ಯುವರಾಜ್ ಸಿಂಗ್ ನೇರವಾಗಿ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ, ಆಟಗಾರರಿಗೆ ಕಿವಿಮಾತು ಹೇಳಿದರು. ಟಾಸ್‌ಗೂ ಮುನ್ನ ತಂಡದ ‘ಹಡಲ್’ನಲ್ಲಿ (ಗುಂಪು ಸಭೆ) ಅಚ್ಚರಿಯ ಅತಿಥಿಯಾಗಿ ಕಾಣಿಸಿಕೊಂಡ ಯುವಿ, ತಮ್ಮ ಅನುಭವಗಳನ್ನು ಹಂಚಿಕೊಂಡು ಆಟಗಾರರಲ್ಲಿ ಸ್ಫೂರ್ತಿ ತುಂಬಿದರು.
ಇದೇ ವೇಳೆ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಯುವರಾಜ್ ಸಿಂಗ್ ಭೇಟಿಯಾದರು. ಇಬ್ಬರೂ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಪ್ರಮುಖ ಸದಸ್ಯರಾಗಿದ್ದರು. ಪಕ್ಕದಲ್ಲಿ ನಿಂತು ನಗು-ಹರಟೆ ಹೊಡೆಯುತ್ತಿದ್ದ ಈ ಇಬ್ಬರು ಗೆಳೆಯರ ದೃಶ್ಯ, ಅಭಿಮಾನಿಗಳಿಗೆ ಹಳೆಯ ಸವಿನೆನಪುಗಳನ್ನು ಮರುಕಳಿಸುವಂತೆ ಮಾಡಿತು.
ಹೊಸ ಕ್ರೀಡಾಂಗಣ, ಹಬ್ಬದ ವಾತಾವರಣ
ಈ ಐತಿಹಾಸಿಕ ಪಂದ್ಯಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ. 95ರಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ (PCA) ಅಧ್ಯಕ್ಷ ಅಮರ್‌ಜಿತ್ ಸಿಂಗ್ ಮೆಹ್ತಾ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ವಿಶ್ವಕಪ್ ವಿಜೇತ ಮಹಿಳಾ ತಂಡದ ಆಟಗಾರ್ತಿಯರಾದ ಹರ್ಲೀನ್ ಡಿಯೋಲ್, ಅಮನ್‌ಜೋತ್ ಕೌರ್ ಮತ್ತು ಫೀಲ್ಡಿಂಗ್ ಕೋಚ್ ಮುನೀಶ್ ಬಾಲಿ ಅವರಿಗೂ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಟ್ಟಿನಲ್ಲಿ, ಪಂದ್ಯದ ರೋಚಕತೆಯ ಜೊತೆಗೆ, ದಿಗ್ಗಜರಿಗೆ ಸಂದ ಗೌರವವು ಮುಲ್ಲನ್‌ಪುರ ಕ್ರೀಡಾಂಗಣದ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿತು.
ಇದನ್ನೂ ಓದಿ: ಟಿ20 ಇತಿಹಾಸದಲ್ಲೇ ಅತ್ಯಂತ ದೀರ್ಘ ಓವರ್ : 7 ವೈಡ್, 13 ಎಸೆತ! ಅರ್ಶದೀಪ್ ಎಡವಟ್ಟಿಗೆ ಗಂಭೀರ್ ತತ್ತರ



















