ಬೆಂಗಳೂರು: ಬಿಬಿಎಂಪಿಗೂ ಮೀಸಲಾತಿ ಗುತ್ತಿಗೆ ಕಾಲಿಟ್ಟಿದೆ.
ಈಗಾಗಲೇ ರಾಜ್ಯ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಗುತ್ತಿಗೆ ಕಾಮಗಾರಿಗೂ ಮೀಸಲಾತಿ ಜಾರಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಆದೇಶದ ಬೆನ್ನಲ್ಲೇ ಎಚ್ಚೆತ್ತ ಮುಸ್ಲಿಂ ಸಮುದಾಯದ ಗುತ್ತಿಗೆದಾರರು, ಮೀಸಲಾತಿಯ ಬೇಡಿಕೆ ಇಟ್ಟಿದ್ದಾರೆ. ಇನ್ನೊಂದೆಡೆ ಬಿಬಿಎಂಪಿ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಓಲೈಕೆಗಾಗಿ ಮುಂದಾಗಿರುವ ಕಾಂಗ್ರೆಸ್, ಮೀಸಲಾತಿಯ ಅಸ್ತ್ರವನ್ನು ಬಿಬಿಎಂಪಿ ಅಂಗಳಕ್ಕೂ ಚೆಲ್ಲಿದೆ.
ಅಕ್ಟೋಬರ್ ಅಥವಾ ನವೆಂಬರ್ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸಿದೆ. ಮುಸ್ಲಿಂ ಮತಗಳು ವಿಭಜನೆ ಆಗದಿರಲಿ ಎಂಬ ಕಾರಣಕ್ಕೆ ಪಾಲಿಕೆಯಲ್ಲೂ ಗುತ್ತಿಗೆ ಮೀಸಲಾತಿ ಜಾರಿ ಮಾಡಿದೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ ಬಿಬಿಎಂಪಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಗುತ್ತಿಗೆ ಮೀಸಲಾತಿ ನೀಡಲಾಗುತ್ತಿತ್ತು. ಈಗ ಸರ್ಕಾರದ ಆದೇಶದಂತೆ ಮುಸ್ಲಿಂರಿಗೆ ಕೂಡ ಮೀಸಲಾತಿ ನೀಡಲಾಗುತ್ತಿದೆ. ಇದು ಕೇವಲ ಚುನಾವಣೆಯ ಗಿಮಿಕ್ ಎಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸುತ್ತಿವೆ.