ಬೆಂಗಳೂರು: ಬಾರಿಯ ಚಳಿಗಾಲದ ಅಧಿವೇಶನವನ್ನು 2 ವಾರಗಳಿಗಿಂತಲೂ ಹೆಚ್ಚು ಸಮಯ ಅಧಿವೇಶನ ನಡೆಸಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ.
ಈ ಬಾರಿಯ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ಡಿ. 9ರಿಂದ ಆರಂಭವಾಗಲಿದೆ. ಹೀಗಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ನೋಂದಣಿ, ಪಡಿತರ ಚೀಟಿ ಗೊಂದಲದ ಬಗ್ಗೆ, ಅಬಕಾರಿ ಇಲಾಖೆ ಹಗರಣದ ಕುರಿತು ನಾವು ಚರ್ಚೆ ನಡೆಸಲಿದ್ದೇವೆ. ಅಲ್ಲದೇ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಕೇಳುತ್ತೇವೆ ಎಂದಿದ್ದಾರೆ.
ಬೈಎಲೆಕ್ಷನ್ನಲ್ಲಿ 3 ಕ್ಷೇತ್ರ ಗೆದ್ದಿದ್ದೇವೆಂದು ಕಾಂಗ್ರೆಸ್ ಬೀಗುತ್ತಿದೆ. ಆದರೆ, ಈ ಸರ್ಕಾರ ಅಧಿಕಾರಿಗಳಿಗೆ ನೇಣುಭಾಗ್ಯ, ವರ್ಗಾವಣೆ ಭಾಗ್ಯ ನೀಡಿದೆ. ಜನರ ಧ್ವನಿಯಾಗಿ ನಾವು ಸದನದಲ್ಲಿ ಹೋರಾಟ ಮಾಡುತ್ತೇವೆ. ಅನುದಾನ ಕಡಿತ, ಬಿತ್ತನೆ ಬೀಜ ಬೆಲೆ ಏರಿಕೆ ವಿಚಾರಗಳ ಬಗ್ಗೆ ಕೂಡ ಚರ್ಚೆ ಮಾಡುತ್ತೇವೆ. ಸರ್ಕಾರದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿರುವ ಕುರಿತು ಚರ್ಚಿಸುತ್ತೇವೆ ಎಂದಿದ್ದಾರೆ.
ವಕ್ಫ್ ವಿಚಾರ ಬಿಜೆಪಿ ವಿಚಾರವಾಗಿ ಉಳಿದಿಲ್ಲ, ಜನರ ವಿಚಾರವಾಗಿದೆ. ವಕ್ಫ್ ವಿಚಾರದಲ್ಲಿ ಯಾರೇ ಹೋರಾಟ ಮಾಡಿದರೂ ಸ್ವಾಗತಿಸುತ್ತೇವೆ. ನಮ್ಮಲ್ಲಿ ಏನೇ ಇದ್ದರೂ ವಿಧಾನಸೌಧದಲ್ಲಿ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದಿದ್ದಾರೆ.