ಮುಂಬೈ: “ಸಂಗಾತಿಯೊಬ್ಬರು ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದು ಕೇವಲ ಭಾವನಾತ್ಮಕ ವಿಚಾರವಲ್ಲ, ಅದು ‘ಮಾನಸಿಕ ಕ್ರೌರ್ಯ‘. ಇಂತಹ ಬೆದರಿಕೆಗಳ ನಡುವೆ ಶಾಂತಿಯುತ ದಾಂಪತ್ಯ ಅಸಾಧ್ಯ,” ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್, ಥಾಣೆ ಮೂಲದ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಎ. ಅಂಕ್ಹಾದ್ ಅವರಿದ್ದ ದ್ವಿಸದಸ್ಯ ಪೀಠವು ಕೌಟುಂಬಿಕ ನ್ಯಾಯಾಲಯದ ಹಿಂದಿನ ತೀರ್ಪನ್ನು ರದ್ದುಗೊಳಿಸಿ, ಪತಿಗೆ ವಿಚ್ಛೇದನ ನೀಡಲು ಆದೇಶಿಸಿದೆ.
ಏನಿದು ಪ್ರಕರಣ?
ಅರ್ಜಿದಾರ ಪತಿ ಮತ್ತು ಪತ್ನಿ 2006ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗನಿದ್ದಾನೆ. ಆರಂಭದಿಂದಲೂ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಪತ್ನಿ ಪದೇ ಪದೇ ಜಗಳವಾಡುವುದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ 2012ರಲ್ಲಿ ಪತ್ನಿ ಮನೆಯಿಂದ ಹೊರಬಂದಿದ್ದು, ಅಂದಿನಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ದಾಂಪತ್ಯ ಜೀವನ ಮುಂದುವರಿಸಲು ಅಸಾಧ್ಯವಾದಾಗ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, 2019ರಲ್ಲಿ ಕೌಟುಂಬಿಕ ನ್ಯಾಯಾಲಯವು, “ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದರೂ, ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಹೀಗಾಗಿ ಇದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು,” ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ಹೇಳಿದ್ದೇನು?
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಕೆಳಕಂಡ ಮಹತ್ವದ ಅವಲೋಕನಗಳನ್ನು ಮಾಡಿದೆ: ಸಂಗಾತಿಯು ಮಾತು, ಸನ್ನೆ ಅಥವಾ ಹಾವಭಾವಗಳ ಮೂಲಕ ಪದೇ ಪದೇ ಆತ್ಮಹತ್ಯೆಯ ಬೆದರಿಕೆ ಹಾಕುವುದು ಇನ್ನೊಬ್ಬರಿಗೆ ಮಾನಸಿಕ ಹಿಂಸೆಯಾಗುತ್ತದೆ. ಇಂತಹ ವಾತಾವರಣದಲ್ಲಿ ನೆಮ್ಮದಿಯಿಂದ ಬದುಕುವುದು ಕಷ್ಟಸಾಧ್ಯ. ಮನೆಯ ಜಗಳ ಬೀದಿಗೆ ಬರಬಾರದು ಅಥವಾ ಪರಿಸ್ಥಿತಿ ಉಲ್ಬಣಗೊಳ್ಳಬಾರದು ಎಂಬ ಉದ್ದೇಶದಿಂದ ಅನೇಕರು ಪೊಲೀಸ್ ಠಾಣೆಗೆ ಹೋಗುವುದಿಲ್ಲ. ದೂರು ದಾಖಲಾಗಿಲ್ಲ ಎಂದ ಮಾತ್ರಕ್ಕೆ ಕ್ರೌರ್ಯ ನಡೆದಿಲ್ಲ ಎಂದು ಭಾವಿಸುವುದು ತಪ್ಪು. ದಂಪತಿ ಕಳೆದ 12 ವರ್ಷಗಳಿಂದ (2012ರಿಂದ) ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಷ್ಟು ದೀರ್ಘಕಾಲದ ಪ್ರತ್ಯೇಕತೆಯ ನಂತರವೂ ವಿವಾಹವನ್ನು ಮುಂದುವರಿಸುವುದು ಇಬ್ಬರಿಗೂ ಶಿಕ್ಷೆ ನೀಡಿದಂತೆ ಎಂದು ಅಭಿಪ್ರಾಯಪಟ್ಟಿದೆ.
ವಿಚ್ಛೇದನ ಮಂಜೂರು ಮಾಡಿದ ನ್ಯಾಯಾಲಯ, ಪತ್ನಿ ಮತ್ತು ಮಗುವಿನ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ ಆದೇಶ ನೀಡಿದೆ. ಪತಿಯು ಪತ್ನಿಗೆ 25 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡಬೇಕು ಹಾಗೂ ಅಂತಿಮ ಇತ್ಯರ್ಥದ ಭಾಗವಾಗಿ ಎರಡು ಫ್ಲ್ಯಾಟ್‌ಗಳ ಮಾಲೀಕತ್ವವನ್ನು ಪತ್ನಿಗೆ ವರ್ಗಾಯಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: ದಾಖಲೆಯ 10ನೇ ಬಾರಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ : ಎನ್‌ಡಿಎ ಬೃಹತ್ ಶಕ್ತಿ ಪ್ರದರ್ಶನ


















