ವಾಷಿಂಗ್ಟನ್: ಅಮೆರಿಕದ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿರುವ ಹಲವು ಮಹತ್ವದ ಆದೇಶಗಳಲ್ಲಿ “ಜನ್ಮಸಿದ್ಧ ಪೌರತ್ವದ ಹಕ್ಕು ವಾಪಸ್”(Right to birthright citizenship is back) ಪಡೆಯುವ ಆದೇಶವೂ ಒಂದು. ಟ್ರಂಪ್ ಅವರ ಈ ಘೋಷಣೆಯಿಂದಾಗಿ, ಅಲ್ಲಿ ಅಮೆರಿಕೇತರ ನಾಗರಿಕರಿಗೆ ಜನಿಸುವಂಥ ಮಕ್ಕಳು ಇನ್ನು ಮುಂದೆ ಆಟೋಮ್ಯಾಟಿಕ್ ಆಗಿ ಅಲ್ಲಿನ ಪೌರತ್ವ (citizenship) ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ.
ಅಮೆರಿಕದಲ್ಲಿ ಜನಿಸುವ ಮಗುವಿಗೆ ಅಲ್ಲಿನ ಪೌರತ್ವ ಸಿಗಬೇಕೆಂದರೆ ಆ ಮಗುವಿನ ತಂದೆ ಅಥವಾ ತಾಯಿ ಅಮೆರಿಕದ ನಾಗರಿಕರಾಗಿರಬೇಕು ಅಥವಾ ಕಾನೂನಾತ್ಮಕ ಕಾಯಂ ನಿವಾಸಿ(ಗ್ರೀನ್ ಕಾರ್ಡ್ ಹೊಂದಿರುವವರು) ಆಗಿರಬೇಕು ಅಥವಾ ಅಮೆರಿಕ ಸೇನೆಯ ಸದಸ್ಯರಾಗಿರಬೇಕು ಎಂದು ಹೊಸ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ, ಎಚ್ -1 ಬಿ ವೀಸಾದಂತಹ ತಾತ್ಕಾಲಿಕ ಕೆಲಸದ ವೀಸಾಗಳ ಮೂಲಕ ಅಮೆರಿಕದಲ್ಲಿ ನೆಲೆಸಿರುವವರು ಅಥವಾ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ಭಾರತೀಯರೂ ಸೇರಿದಂತೆ ವಿದೇಶಿ ಪ್ರಜೆಗಳಿಗೆ ಜನಿಸಿದ ಮಕ್ಕಳು ಇನ್ನು ಮುಂದೆ ಸ್ವಯಂಚಾಲಿತವಾಗಿ ಯುಎಸ್ ಪೌರತ್ವ ಪಡೆಯುವುದಿಲ್ಲ. ಆದರೆ, ಈ ಹೊಸ ಕಾನೂನು ಜಾರಿಯಾಗಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ಇದು ದೀರ್ಘಕಾಲದ ಪ್ರಕ್ರಿಯೆಯಾಗಿರುವ ಕಾರಣ, ಟ್ರಂಪ್ ಆಡಳಿತಕ್ಕೂ ಕಾನೂನಾತ್ಮಕ ಸವಾಲುಗಳು ಎದುರಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏನಿದು ಜನ್ಮಸಿದ್ಧ ಪೌರತ್ವ ಹಕ್ಕು?
ಈವರೆಗೆ ಇದ್ದ ನಿಯಮದಂತೆ, ಅಮೆರಿಕದ ನೆಲದಲ್ಲಿ ಯಾರೇ ಜನಿಸಿದರೂ ಅವರು ಸ್ವಯಂಚಾಲಿತವಾಗಿ ಆ ದೇಶದ ಪೌರತ್ವ ಪಡೆಯುತ್ತಾರೆ. ಪೋಷಕರು ಯಾವ ದೇಶದವರಾಗಿದ್ದರೂ ಅವರ ಮಕ್ಕಳಿಗೆ ಈ ಹಕ್ಕು ಹುಟ್ಟುತ್ತಲೇ ಸಿಗುತ್ತದೆ. ಇದನ್ನು ಜನ್ಮಸಿದ್ಧ ಪೌರತ್ವದ ಹಕ್ಕು ಎಂದು ಕರೆಯುತ್ತಾರೆ. 1868ರಲ್ಲಿ ಈ ಕಾನೂನು ಅಮೆರಿಕದಲ್ಲಿ ಜಾರಿಯಾಗಿತ್ತು. ದಕ್ಷಿಣದ ಪ್ರಾಂತ್ಯಗಳಲ್ಲಿ ಕಪ್ಪು ಜನಾಂಗೀಯರನ್ನು ಗುಲಾಮರನ್ನಾಗಿ ನಡೆಸುವ ಅಭ್ಯಾಸಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಅಮೆರಿಕದ ನಾಗರಿಕ ಯುದ್ಧ ಅಂತ್ಯವಾದ ಮೂರು ವರ್ಷಗಳಲ್ಲೇ ಈ ಕಾನೂನನ್ನು ಜಾರಿ ಮಾಡಲಾಗಿತ್ತು.

ಭಾರತೀಯರ ಮೇಲೇನು ಪರಿಣಾಮ?
ಅಮೆರಿಕದಲ್ಲಿರುವ ಭಾರತೀಯ ಪೋಷಕರಿಗೆ ಹುಟ್ಟುವ ಮಕ್ಕಳು ಇನ್ನು ಮುಂದೆ ಆಟೋಮ್ಯಾಟಿಕ್ ಆಗಿ ಅಮೆರಿಕದ ಪೌರತ್ವ ಪಡೆಯಲಾಗದು.
ಈಗಾಗಲೇ ಭಾರತೀಯ ವಲಸಿಗರು ಗ್ರೀನ್ ಕಾರ್ಡ್ ಪಡೆಯಲು ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ. ಈ ಕಾನೂನು ಜಾರಿಯಾದರೆ, ಅವರ ಮಕ್ಕಳಿಗೂ ಪೌರತ್ವ ಸಿಗದ ಕಾರಣ ಗ್ರೀನ್ ಕಾರ್ಡ್ ಸಿಗುವುದು ಮತ್ತಷ್ಟು ವಿಳಂಬವಾಗಲಿದೆ.
ಅಮೆರಿಕದಲ್ಲಿ ಜನಿಸಿದ ಮಕ್ಕಳು ತಮಗೆ 21 ವರ್ಷ ತುಂಬುತ್ತಲೇ ತಮ್ಮ ಹೆತ್ತವರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಅವಕಾಶ ಈವರೆಗೆ ಇತ್ತು. ಇನ್ನು ಮುಂದೆ ಮಕ್ಕಳಿಗೇ ಜನ್ಮಸಿದ್ಧ ಪೌರತ್ವ ಸಿಗದ ಕಾರಣ, ಅವರು ಹೆತ್ತವರನ್ನು ಕರೆಸಿಕೊಳ್ಳಲು ಆಗುವುದಿಲ್ಲ. ಇದರಿಂದ ಕುಟುಂಬಗಳು ಪ್ರತ್ಯೇಕವಾಗಿಯೇ ಉಳಿಯಬೇಕಾಗುತ್ತವೆ.
ಮಗುವಿಗೆ ಅಮೆರಿಕದ ಪೌರತ್ವ ಸಿಗಲಿ ಎಂಬ ಕಾರಣಕ್ಕೇ ಕೆಲವರು ಆ ದೇಶಕ್ಕೆ ಹೋಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಇಂತಹ ಜನನ ಪ್ರವಾಸೋದ್ಯಮಕ್ಕೆ ಈಗ ಬ್ರೇಕ್ ಬೀಳಲಿದೆ.
ವಲಸೆಯೇತರ ವೀಸಾದಲ್ಲಿ ಅಮೆರಿಕಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲೇ ಮಕ್ಕಳು ಹುಟ್ಟಿದರೆ ಅವರೂ ಅಭದ್ರತೆ ಎದುರಿಸಬೇಕಾಗುತ್ತದೆ.
ತಾತ್ಕಾಲಿಕ ಉದ್ಯೋಗದ ವೀಸಾದಲ್ಲಿ ಅಮೆರಿಕಕ್ಕೆ ಹೋಗಿರುವವರು ಅಥವಾ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವವರಿಗೆ ಅಲ್ಲೇ ಮಕ್ಕಳು ಜನಿಸಿದರೆ, ಇಡೀ ಕುಟುಂಬ ಕಾನೂನಾತ್ಮಕ ಗೊಂದಲಕ್ಕೆ ಸಿಲುಕಲಿದೆ.