ನಟ ದರ್ಶನ್ ಹಾಗೂ ಗ್ಯಾಂಗ್ ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದೆ. ಈಗಾಗಲೇ ಕೊಲೆ ಪ್ರಕರಣದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ತನಿಖಾಧಿಕಾರಿಗಳ ಕೈಗೆ ಬಂದಿದ್ದು, ಕೊಲೆ ನಡೆದಿರುವ ವರದಿಯಲ್ಲಿ ಭಯಾನಕ ಸತ್ಯ ಇದೆ ಎನ್ನಲಾಗುತ್ತಿದೆ.
ವೈದ್ಯರು ಕೊಲೆಯ ಇಂಚಿಂಚು ಮಾಹಿತಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮೃತದೇಹದ ಪೋಸ್ಟ್ ಮಾರ್ಟಂ ನಡೆದಿತ್ತು. ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ನಾಲ್ಕೈದು ಗಂಟೆಗಳ ಕಾಲ ಚಿತ್ರ ಹಿಂಸೆ ಅನುಭವಿಸಿದ್ದಾರೆ. ರೇಣುಕಾಸ್ವಾಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಬಲವಾದ ಆಯುಧಗಳಿಂದ ಹೊಡೆತ ಬಿದ್ದ ಪರಿಣಾಮ ನೋವು ತಡೆಯಲಾರದೆ ಹಂತ ಹಂತವಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ. ದೇಹದ ಹಲವು ಭಾಗಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿವೆ. ಪೆಟ್ಟು ಜೋರಾಗಿ ಬಿದ್ದಿದ್ದರಿಂದಾಗಿ ಮೂಳೆಗಳು ಮುರಿದಿವೆ. ಕೃತ್ಯ ನಡೆದ ದಿನ ಸಂಜೆ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ ಎಂದು ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಟ್ಟಣಗೆರೆ ಶೆಡ್ ನಲ್ಲಿನ ಸಿಸಿಟಿವಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಎಳೆದೊಯ್ಯುವ ದೃಶ್ಯ ಸೆರೆಯಾಗಿದೆ. ಆದರೆ, ಆರೋಪಿಗಳು ಸಿಸಿಟಿವಿ ದೃಶ್ಯಾವಳಿ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ರಿಟ್ರೀವ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವ ವಿಡಿಯೋವನ್ನು ಪ್ರದೂಷ್ ರೆಕಾರ್ಡ್ ಮಾಡಿದ್ದ ಎನ್ನಲಾಗಿದೆ. ಇದನ್ನು ವಿಡಿಯೋ ಮಾಡಲು ಸ್ವತಃ ದರ್ಶನ್ ಹೇಳಿದ್ದರು ಎನ್ನಲಾಗಿದೆ. ಹಲವು ಸಾಕ್ಷಿಗಳು ದರ್ಶನ್ ಅವರಿಗೆ ಮತ್ತಷ್ಟು ಉರುಳು ತರುವುದರಲ್ಲಿ ಸಂಶಯವೇ ಇಲ್ಲ ಎನ್ನಲಾಗುತ್ತಿದೆ.