ನವ ದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ನೀಡಿರುವ ಜಾಮೀನು ಅರ್ಜಿಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಇಂದು (ಗುರುವಾರ) ಮಹತ್ವದ ತೀರ್ಪು ನೀಡಿದೆ.
ದರ್ಶನ್ ಮತ್ತು ಪ್ರಕರಣದ ಇತರೆ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಈ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಆರ್. ಮಹಾದೇವನ್ ಅವರ ಪೀಠ, ಕಾಯ್ದಿರಿಸಿದ ತೀರ್ಪನ್ನು ಇಂದು ನೀಡಿದೆ.
ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಸುಪ್ರೀಂಕೋರ್ಟ್ನ ನ್ಯಾ.ಜೆ.ಬಿ.ಪರ್ದಿವಾಲಾ,.ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠದಿಂದ ಈ ಆದೇಶ ಬಂದಿದೆ. ಇದರಿಂದ ದರ್ಶನ್ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ. ದರ್ಶನ್ ವೃತ್ತಿ ಜೀವನದ ಮೇಲೆ ಈ ತೀರ್ಪು ದೊಡ್ಡ ಪ್ರಭಾವ ಬೀರಲಿದೆ. ತತ್‌ಕ್ಷಣದಿಂದಲೇ ದರ್ಶನ್, ಪವಿತ್ರಾ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆಯಬೇಕೆಂದು ಸುಪ್ರೀಂ ಖಡಕ್ ಆದೇಶಿಸಿದೆ.
ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ‘ಆರೋಪಿ ಎಷ್ಟೇ ದೊಡ್ಡವರಿದ್ದರೂ ಅವರು ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತ ಎತ್ತಿ ಹಿಡಿಯಲಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್ ಮೆಂಟ್ ನೀಡಲಾಗಿದೆ. ಜೈಲು ಸೂಪರಿಂಟೆಂಡ್ನನ್ನು ಸಸ್ಪೆಂಡ್ ಮಾಡಬೇಕಿತ್ತು’ ಎಂದು ಕೊರ್ಟ್ ಅಭಿಪ್ರಾಯಪಟ್ಟಿದೆ. ಈ ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪೆಂದು ಸುಪ್ರೀಂಕೋರ್ಟ್ ಹೇಳಿದೆ. ಮಾತ್ರವಲ್ಲದೇ, ಜೈಲಿನಲ್ಲಿ ದರ್ಶನ್ ಸೇರಿ ಆರೋಪಿಗಳಿಗೆ ರಾಜಾಥಿತ್ಯ ನೀಡಿದ ಜೈಲಾಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆದೇಶಿಸಿದೆ.
ಕಳೆದ ವರ್ಷ ಜೂನ್ 11ರಂದು ದರ್ಶನ್ ಬಂಧನಕ್ಕೆ ಒಳಗಾದರು. ಆ ಬಳಿಕ ನಾಲ್ಕು ತಿಂಗಳಿಗೂ ಅಧಿಕ ಸಮಯ ಅವರು ಜೈಲಿನಲ್ಲಿ ಇರಬೇಕಾದ ಸ್ಥಿತಿ ಬಂದೊದಗಿತ್ತು. ಆ ಬಳಿಕ ಬೆನ್ನು ನೋವಿನ ಕಾರಣ ನೀಡಿ ಜೈಲಿನಿಂದ ಹೊರ ಬಂದರು. ಡಿಸೆಂಬರ್ನಲ್ಲಿ ಅವರಿಗೆ ಸಂಪೂರ್ಣ ಜಾಮೀನು ದೊರೆಯಿತು. ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಬಳಿ ಪ್ರಶ್ನೆ ಮಾಡಿತ್ತು.
ಜಾಮೀನು ರದ್ದತಿ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಜಾಮೀನು ರದ್ದತಿಯಾಗಲಿದೆ ಎಂದು ಚಿಂತಿಸುವಂತೆ ಮಾಡಿದೆ. 7 ಆರೋಪಿಗಳ ಜಾಮೀನು ನಿರ್ಧರಿಸುವಾಗ ಹೈಕೋರ್ಟ್ ಖುಲಾಸೆಗೊಳಿಸುವಂತೆ ಆದೇಶ ಹೊರಡಿಸಿದೆ. ಪ್ರತಿಯೊಂದು ಜಾಮೀನು ಕೊಡುವಾಗ ಹೈಕೋರ್ಟ್ ಇಂಥ ಆದೇಶವನ್ನೇ ನೀಡುತ್ತದೆಯೇ? ಎಂದು ಪ್ರಶ್ನಿಸಿತ್ತು.
ಜೊತೆಗೆ ವಿವೇಚನಾಧಿಕಾರವನ್ನು ಹೈಕೋರ್ಟ್ ತಪ್ಪಾಗಿ ಪ್ರಯೋಗಿಸಿದೆ. ಹೈಕೋರ್ಟ್ ನಿಜಕ್ಕೂ ತನ್ನ ಬುದ್ಧಿಯನ್ನು ಬಳಸಿದೆಯೇ? ಎಂದು ಅಸಮಾಧಾನ ಹೊರಹಾಕಿತ್ತು. ಹೈಕೋರ್ಟ್ ರೀತಿ ನಾವು ಮತ್ತದೇ ತಪ್ಪು ಮಾಡುವುದಿಲ್ಲ. ದೋಷಿ ಅಥವಾ ನಿರ್ದೋಷಿ ಎಂಬುದನ್ನು ನಾವು ನಿರ್ಧರಿಸುವುದಿಲ್ಲ. ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಇಂತಹ ತಪ್ಪು ಮಾಡಬಹುದು. ಆದರೆ ಹೈಕೋರ್ಟ್ ಜಡ್ಜ್ ಅಂತಹ ತಪ್ಪು ಮಾಡುತ್ತಾರೆಂದರೆ ಹೇಗೆ? ಎಂದು ಹೇಳಿತ್ತು.