ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿ ಏಳು ಮಂದಿಯ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.
ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಿದ್ದು, ದರ್ಶನ್ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ವಾದ ಮಂಡನೆ ಆರಂಭಿಸಿದ್ದಾರೆ. ವಾದ ಆಲಿಸಿದ ಬಳಿಕ ಇಂದೇ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದರ್ಶನ್ ಸೇರಿ ಎ1 ಆರೋಪಿ ಆಗಿರುವ ಪವಿತ್ರಾಗೌಡ ಅವರ ಜಾಮೀನು ಭವಿಷ್ಯವೂ ಇಂದೇ ನಿರ್ಧಾರವಾಗಲಿದೆ. ಈ ಹಿನ್ನೆಲೆ ಕೋರ್ಟ್ ತೀರ್ಪಿಗೂ ಮುನ್ನವೇ ಪವಿತ್ರಾಗೌಡ ರಾಯರ ಮೊರೆ ಹೋಗಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಫೋಟೋ ಹಂಚಿಕೊಂಡಿರುವ ನಟಿ ಕೈ ಮುಗಿಯುತ್ತಿರುವ ಇಮೋಜಿಯನ್ನೂ ಬಳಸಿದ್ದಾರೆ. ಈ ಮೂಲಕ ದೇವರ ಮೇಲೆ ಭಾರ ಹಾಕಿದ್ದೀನಿ, ಎಲ್ಲವನ್ನೂ ಆ ದೇವರು ನೋಡಿಕೊಳ್ತಾನೆ ಎನ್ನುವ ಪರೀಕ್ಷೆ ಸಂದೇಶ ಕೊಟ್ಟಿದ್ದಾರೆ.
ಕಳೆದ ಜು.22ರ ಮಂಗಳವಾರವೇ ಈ ಅರ್ಜಿ ವಿಚಾರಣೆ ಮುಗಿಯಬೇಕಿತ್ತು. ಆದರೆ ಅಂದು ಕಪಿಲ್ ಸಿಬಲ್ ಕೋರ್ಟ್‌ಗೆ ಗೈರಾಗಿದ್ದರು. ಬಳಿಕ ದರ್ಶನ್ ಪರವಾಗಿ ಕೋರ್ಟ್ ಮುಂದೆ ಹಾಜರಾಗಿದ್ದ ವಕೀಲ ಸಿದ್ದಾರ್ಥ ದವೆ, ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕಳೆದ ರಾತ್ರಿ ಈ ಪ್ರಕರಣ ನನಗೆ ಬಂದಿದೆ. ಇದರ ಬಗ್ಗೆ ಅಧ್ಯಯನ ಮಾಡಬೇಕಿದೆ ಸ್ವಲ್ಪ ಸಮಯ ಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ನ್ಯಾ. ಪಾರ್ದಿವಾಲ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.
ಇದೇ ವೇಳೆ ಕೋರ್ಟ್ ಲಿಖಿತ ರೂಪದಲ್ಲಿ ದಾಖಲೆ ಸಿದ್ಧಪಡಿಸಲು ಹಾಗೂ ಶೇ.75ರಷ್ಟು ಲಿಖಿತ ರೂಪದಲ್ಲಿ ವಾದ ಮಂಡಿಸಿ ಸೂಚಿಸಿತ್ತು. ಕೆಲ ಕಾಲ ಅಷ್ಟೇ ವಾದ ಮಂಡನೆಗೆ ಅವಕಾಶ ಕೊಡುವುದಾಗಿ ನ್ಯಾಯಪೀಠ ಹೇಳಿತ್ತು.