ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ (Renuka Swamy Murder Case)ದ ನಾಲ್ವರು ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ನಟ ದರ್ಶನ್ (Darshan) ಮತ್ತು ಗ್ಯಾಂಗ್ ನ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಆರೋಪಿಗಳ ಸ್ಥಳಾಂತರಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಆದರೆ, ಇದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ರೇಣುಕಾಸ್ವಾಮಿಯನ್ನು ನಾವೇ ಕೊಲೆ ಮಾಡಿದ್ದೇವೆಂದು ಮೊದಲು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಶರಣಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಈ ಮೂವರು ಬಾಯಿ ಬಿಟ್ಟಿದ್ದರಿಂದಾಗಿ ದರ್ಶನ್ ಮತ್ತು ಗ್ಯಾಂಗ್ ಬಂಧನವಾಗಿತ್ತು. ನಂತರ ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಕಾರು ಚಾಲಕ ರವಿಶಂಕರ್ ಶರಣಾಗಿದ್ದ. ಈತ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಟ್ಯಾಕ್ಸಿ ಸಂಘದವರ ಸಹಾಯ ಕೇಳಿ ಬಂದಿದ್ದ ಚಾಲಕ ರವಿಶಂಕರ್ ನನ್ನು ಡಿವೈಎಸ್ಪಿ ಕಚೇರಿಗೆ ಕರೆತಂದು ಟ್ಯಾಕ್ಸಿ ಸಂಘದ ಮುಖಂಡರು ಶರಣಾಗತಿ ಮಾಡಿಸಿದ್ದರು. ಸದ್ಯ ಈ ನಾಲ್ವರನ್ನು ತುಮಕೂರು ಜೈಲಿಗೆ ಅಟ್ಟಲಾಗಿದೆ.
ಜೈಲಿನ ಭದ್ರತಾ ವಿಭಾಗದ ಬ್ಯಾರಕ್ ನ ವಿಶೇಷ ಸೆಲ್ ನಲ್ಲಿರುವ ದರ್ಶನ್ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ದರ್ಶನ್ ಆಪ್ತರು, ಕುಟುಂಬದವರು ಮತ್ತು ಪವಿತ್ರಾ ಗೌಡ ಫ್ಯಾಮಿಯವರು ಭೇಟಿ ಮಾಡಿದ್ದಾರೆ.