ಬೆಂಗಳೂರು: ರೆನೊಇಂಡಿಯಾ, ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ 10 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಗಾಗಿ, ’10ನೇ ವಾರ್ಷಿಕೋತ್ಸವದ ಆವೃತ್ತಿ’ಯನ್ನು (10th Anniversary Edition) ಬಿಡುಗಡೆ ಮಾಡಿದೆ. ಈ ವಿಶೇಷ ಮಾದರಿಯ ಎಕ್ಸ್ ಶೋರೂಂ ಬೆಲೆ 5.15 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದರ ಜೊತೆಗೆ, ಕಂಪನಿಯು ತನ್ನ ಸಾಮಾನ್ಯ ಕ್ವಿಡ್ ಶ್ರೇಣಿಯಲ್ಲಿಯೂ ಮಹತ್ವದ ಸುರಕ್ಷತಾ ಬದಲಾವಣೆಗಳನ್ನು ಪರಿಚಯಿಸಿದ್ದು, ವೇರಿಯೆಂಟ್‌ಗಳ ಹೆಸರುಗಳನ್ನು ಸಹ ನವೀಕರಿಸಿದೆ.

ವಾರ್ಷಿಕೋತ್ಸವದ ಆವೃತ್ತಿಯು ಕೇವಲ 500 ಯುನಿಟ್‌ಗಳಿಗೆ ಸೀಮಿತವಾಗಿದ್ದು, ಮಧ್ಯಮ ಶ್ರೇಣಿಯ ‘ಟೆಕ್ನೋ’ ಟ್ರಿಮ್ ಅನ್ನು ಆಧರಿಸಿದೆ. ಇದು ಫೈರಿ ರೆಡ್ ಜೊತೆ ಕಪ್ಪು ರೂಫ್ ಮತ್ತು ಹೊಸ ಶ್ಯಾಡೋ ಗ್ರೇ ಜೊತೆ ಕಪ್ಪು ರೂಫ್ ಎಂಬ ಎರಡು ಆಕರ್ಷಕ ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಕಾರಿನ ಹೊರಭಾಗದಲ್ಲಿ ಗ್ರಿಲ್, ಡೋರ್ ಮತ್ತು ಸಿ-ಪಿಲ್ಲರ್‌ಗಳ ಮೇಲೆ ಹಳದಿ ಬಣ್ಣದ ಆಕ್ಸೆಂಟ್‌ಗಳು, ಹೊಸ ಡೆಕಾಲ್‌ಗಳು ಹಾಗೂ ಹೊಳಪಿನ ಕಪ್ಪು ಫ್ಲೆಕ್ಸಿ ವೀಲ್‌ಗಳನ್ನು ನೀಡಿ ವಿಶಿಷ್ಟ ವಿನ್ಯಾಸ ರೂಪಿಸಲಾಗಿದೆ. ಕಾರಿನ ಒಳಭಾಗದಲ್ಲಿ, ಹಳದಿ ಹೊಲಿಗೆಯಿರುವ ಲೆದರ್ ಹೊದಿಕೆಯ ಸ್ಟೀರಿಂಗ್ ವೀಲ್, ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸೀಟುಗಳು ಮತ್ತು ಡೋರ್ ಪ್ಯಾಡ್‌ಗಳ ಮೇಲೆ ಹಳದಿ ಬಣ್ಣದ ವಿನ್ಯಾಸವಿದೆ. ಮುಂಭಾಗದ ಸೀಟುಗಳ ಹೆಡ್‌ರೆಸ್ಟ್ ಮೇಲೆ ’10th Anniversary Edition’ ಲೋಗೋ ಮತ್ತು ಪಡಲ್ ಲ್ಯಾಂಪ್‌ಗಳು ಇದರ ವಿಶೇಷತೆಯನ್ನು ಹೆಚ್ಚಿಸಿವೆ.

ಸುರಕ್ಷತೆಯ ದೃಷ್ಟಿಯಿಂದ, ಕ್ವಿಡ್‌ನ ಟಾಪ್-ಸ್ಪೆಕ್ ‘ಕ್ಲೈಂಬರ್’ ಮಾದರಿಯಲ್ಲಿ ಈಗ 2 ಏರ್‌ಬ್ಯಾಗ್‌ಗಳ ಬದಲು 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಎಲ್ಲಾ ವೇರಿಯೆಂಟ್‌ಗಳಲ್ಲಿ ಪ್ರತಿ ಸೀಟಿಗೂ 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ವೇರಿಯೆಂಟ್‌ಗಳ ಹೆಸರುಗಳನ್ನು ಸಹ ಬದಲಾಯಿಸಲಾಗಿದ್ದು, ಈ ಹಿಂದಿನ RXE, RXL, RXT ಮಾದರಿಗಳ ಬದಲು ಈಗ ಆಥೆಂಟಿಕ್, ಎವಲ್ಯೂಷನ್, ಟೆಕ್ನೋ ಮತ್ತು ಕ್ಲೈಂಬರ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ. ಹೊಸ ಬೆಲೆ ಪಟ್ಟಿಯ ಪ್ರಕಾರ, ಬೇಸ್ ಮಾಡೆಲ್ ‘ಆಥೆಂಟಿಕ್’ 4.30 ಲಕ್ಷ ರೂಪಾಯಿಗಳಿಗೆ ಲಭ್ಯವಿದ್ದರೆ, ಟಾಪ್ ಎಂಡ್ ‘ಕ್ಲೈಂಬರ್ ಎಎಂಟಿ’ ಮಾದರಿಯ ಬೆಲೆ 5.88 ಲಕ್ಷ ರೂಪಾಯಿ ಆಗಿದೆ.
ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು 1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68hp ಪವರ್ ಮತ್ತು 91Nm ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿವೆ. ಭಾರತೀಯ ಮಾರುಕಟ್ಟೆಯಲ್ಲಿ ರೆನೊಕ್ವಿಡ್, ಮಾರುತಿ ಸುಜುಕಿ ಆಲ್ಟೊ ಕೆ10 ಮತ್ತು ಎಸ್-ಪ್ರೆಸ್ಸೊ ಮಾದರಿಗಳಿಗೆ ನೇರ ಸ್ಪರ್ಧೆ ನೀಡುತ್ತದೆ.