ಚೆನ್ನೈ : ಭಾರತದ ಮಾರುಕಟ್ಟೆಯಲ್ಲಿ ಮಿಡ್-ಸೈಜ್ ಎಸ್ಯುವಿ ವಿಭಾಗಕ್ಕೆ ಬುನಾದಿ ಹಾಕಿದ್ದ ಜನಪ್ರಿಯ ‘ರೆನಾಲ್ಟ್ ಡಸ್ಟರ್’ (Renault Duster) ಮತ್ತೆ ಭಾರತಕ್ಕೆ ಲಗ್ಗೆ ಇಟ್ಟಿದೆ. 2026ರ ಗಣರಾಜ್ಯೋತ್ಸವದಂದು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ರೆನಾಲ್ಟ್ ಇಂಡಿಯಾ, ತನ್ನ ಮೂರನೇ ತಲೆಮಾರಿನ ಡಸ್ಟರ್ ಎಸ್ಯುವಿಯನ್ನು ಅನಾವರಣಗೊಳಿಸಿದೆ.

ಈ ಮೂಲಕ ತೀವ್ರ ಪೈಪೋಟಿ ಇರುವ ಎಸ್ಯುವಿ ಮಾರುಕಟ್ಟೆಗೆ ಫ್ರೆಂಚ್ ವಾಹನ ತಯಾರಕ ಕಂಪನಿ ಮತ್ತೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಹೊಸ ಅವತಾರದಲ್ಲಿ ಬಂದಿರುವ ಡಸ್ಟರ್, ಹೈಬ್ರಿಡ್ ಎಂಜಿನ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.
21,000 ರೂ. ನೀಡಿ ಈಗಲೇ ಬುಕ್ ಮಾಡಿ
ಹೊಸ ಡಸ್ಟರ್ಗಾಗಿ ಪ್ರೀ-ಬುಕಿಂಗ್ (Pre-bookings) ಪ್ರಕ್ರಿಯೆ ಈಗಾಗಲೆ ಆರಂಭವಾಗಿದೆ. ಆಸಕ್ತ ಗ್ರಾಹಕರು 21,000 ರೂಪಾಯಿ ಪಾವತಿಸಿ ತಮ್ಮ ವಾಹನವನ್ನು ಕಾಯ್ದಿರಿಸಿಕೊಳ್ಳಬಹುದು. ಕಂಪನಿಯು ಮಾರ್ಚ್ 2026ರಲ್ಲಿ ವಾಹನದ ಅಧಿಕೃತ ಬೆಲೆಯನ್ನು ಪ್ರಕಟಿಸಲಿದ್ದು, ಏಪ್ರಿಲ್ ತಿಂಗಳಲ್ಲಿ ಟರ್ಬೊ-ಪೆಟ್ರೋಲ್ ಮಾದರಿಗಳ ವಿತರಣೆ ಆರಂಭವಾಗಲಿದೆ. ಹೈಬ್ರಿಡ್ ಮಾದರಿಯು ದೀಪಾವಳಿ ಹಬ್ಬದ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಖಡಕ್ ಲುಕ್, ದೇಸಿ ಟಚ್
ಹೊಸ ತಲೆಮಾರಿನ ಡಸ್ಟರ್ ತನ್ನ ಹಳೆಯ ಗತ್ತು ಮತ್ತು ದೃಢತೆಯನ್ನು ಉಳಿಸಿಕೊಂಡೇ ಆಧುನಿಕ ಸ್ಪರ್ಶ ಪಡೆದಿದೆ. ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್ಲ್ಯಾಂಪ್ಗಳು, ಕಣ್ಣಿನ ಹುಬ್ಬಿನ ಆಕಾರದ ಎಲ್ಇಡಿ ಡಿಆರ್ಎಲ್ಗಳು ಮತ್ತು ಕನೆಕ್ಟೆಡ್ ಟೈಲ್-ಲ್ಯಾಂಪ್ ಬಾರ್ ಇದರ ಅಂದ ಹೆಚ್ಚಿಸಿವೆ. 18 ಇಂಚಿನ ಕಪ್ಪು ಅಲಾಯ್ ವೀಲ್ಸ್, 212 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹಿಮಾಲಯದ ಕಾಡುಗಳಿಂದ ಸ್ಫೂರ್ತಿ ಪಡೆದ ವಿಶೇಷ ‘ಮೌಂಟೇನ್ ಜೇಡ್ ಗ್ರೀನ್’ ಬಣ್ಣ ಈ ಎಸ್ಯುವಿಗೆ ಪ್ರೀಮಿಯಂ ಲುಕ್ ನೀಡಿದೆ.

ವಿಮಾನದ ಕಾಕ್ಪಿಟ್ ಮಾದರಿಯ ಒಳಾಂಗಣ
ಕಾರಿನ ಒಳಭಾಗವನ್ನು ಯುದ್ಧ ವಿಮಾನದ ಕಾಕ್ಪಿಟ್ನಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದೆ. 10.1 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್ಲೆಸ್ ಆಪಲ್ ಕಾರ್ಪ್ಲೇ/ಆಂಡ್ರಾಯ್ಡ್ ಆಟೋ ಮತ್ತು 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಪನೋರಮಿಕ್ ಸನ್ರೂಫ್, ವೆಂಟಿಲೇಟೆಡ್ ಸೀಟ್ಗಳು, 360-ಡಿಗ್ರಿ ಕ್ಯಾಮೆರಾ, ಪ್ರೀಮಿಯಂ ಅರ್ಕಾಮಿಸ್ ಸೌಂಡ್ ಸಿಸ್ಟಮ್ ಮತ್ತು ವೈರ್ಲೆಸ್ ಚಾರ್ಜರ್ ಸೇರಿದಂತೆ ಹಲವು ಸೌಲಭ್ಯಗಳಿವೆ.

ಎಂಜಿನ್ ಮತ್ತು ಮೈಲೇಜ್ ಕಿಂಗ್ ‘ಹೈಬ್ರಿಡ್’
ರೆನಾಲ್ಟ್ ಈ ಬಾರಿ ಡೀಸೆಲ್ ಎಂಜಿನ್ ಕೈಬಿಟ್ಟಿದ್ದು, ಸಂಪೂರ್ಣವಾಗಿ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ಗಳಿಗೆ ಒತ್ತು ನೀಡಿದೆ.
- 1.0 ಲೀಟರ್ ಟರ್ಬೊ ಪೆಟ್ರೋಲ್: 100 ಬಿಎಚ್ಪಿ ಶಕ್ತಿ.
- 1.3 ಲೀಟರ್ ಟರ್ಬೊ ಪೆಟ್ರೋಲ್: 163 ಬಿಎಚ್ಪಿ ಶಕ್ತಿ (ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆ).
- ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್: 1.8 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದ್ದು, ನಗರ ಪ್ರದೇಶದಲ್ಲಿ ಶೇ.80 ರಷ್ಟು ಎಲೆಕ್ಟ್ರಿಕ್ ಮೋಡ್ನಲ್ಲೇ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸುರಕ್ಷತೆಯಲ್ಲಿ ನಂಬರ್ 1: ADAS ಅಳವಡಿಕೆ
ಭಾರತದಲ್ಲಿ ಲೆವೆಲ್-2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ತಂತ್ರಜ್ಞಾನದೊಂದಿಗೆ ಬರುತ್ತಿರುವ ರೆನಾಲ್ಟ್ನ ಮೊದಲ ಕಾರು ಇದಾಗಿದೆ. 6 ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಯಾರಿಗೆ ಪೈಪೋಟಿ?
ಹೊಸ ಡಸ್ಟರ್ ಮಾರುಕಟ್ಟೆಗೆ ಬಂದರೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್ ಮತ್ತು ಟಾಟಾ ಸಿಯೆರಾ ಮುಂತಾದ ದಿಗ್ಗಜ ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ.
ಇದನ್ನೂ ಓದಿ ; ಮಹೀಂದ್ರಾ ಥಾರ್ ರಾಕ್ಸ್ ‘ಸ್ಟಾರ್ ಎಡಿಷನ್’ ಲಗ್ಗೆ | ಹೈಟೆಕ್ ವಿನ್ಯಾಸದೊಂದಿಗೆ ರಸ್ತೆಗಿಳಿದ ಲೈಫ್ಸ್ಟೈಲ್ ಎಸ್ಯುವಿ



















