ನವದೆಹಲಿ: ದೇಶದಲ್ಲಿ ನಾಯಿ ಕಡಿತ ಪ್ರಕರಣಗಳು “ಆತಂಕಕಾರಿ ರೀತಿಯಲ್ಲಿ” ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾ ಸಂಕೀರ್ಣಗಳು ಮತ್ತು ರೈಲ್ವೆ ನಿಲ್ದಾಣಗಳಿಂದ ಎಲ್ಲಾ ಬೀದಿ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ಗೊತ್ತುಪಡಿಸಿದ ಆಶ್ರಯ ತಾಣಗಳಿಗೆ ಕಳುಹಿಸುವಂತೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಬೀದಿ ನಾಯಿಗಳ ಕಡಿತದ ಘಟನೆಗಳ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದು, ಈ ಆದೇಶ ನೀಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಆವರಣಕ್ಕೆ ನಾಯಿಗಳು ಪ್ರವೇಶಿಸದಂತೆ ಅಧಿಕಾರಿಗಳು ತಡೆಯಬೇಕು. ಅಲ್ಲದೆ, ಹಿಡಿದ ನಾಯಿಗಳನ್ನು ಮತ್ತೆ ಅದೇ ಸ್ಥಳಕ್ಕೆ ಬಿಡಬಾರದು ಎಂದು ಸ್ಪಷ್ಟಪಡಿಸಿದೆ. ಈ ತೆರವು ಕಾರ್ಯಾಚರಣೆಯನ್ನು ಎಂಟು ವಾರಗಳೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 13ಕ್ಕೆ ನಿಗದಿಪಡಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಬೀದಿ ನಾಯಿಗಳ ಕಡಿತದಿಂದ ರೇಬೀಸ್ ಹರಡುತ್ತಿರುವ ಕುರಿತ ವರದಿಯ ಆಧಾರದ ಮೇಲೆ ನ್ಯಾಯಾಲಯವು ಜುಲೈ 28 ರಂದು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಹೆದ್ದಾರಿಗಳಿಂದ ಜಾನುವಾರು ತೆರವು
ಇದೇ ವೇಳೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳಿಂದ ಬೀಡಾಡಿ ಜಾನುವಾರುಗಳನ್ನು ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ರಸ್ತೆಗಳಲ್ಲಿ ಅಲೆಯುವ ಜಾನುವಾರುಗಳನ್ನು ಹಿಡಿದು, ಅವುಗಳಿಗೆ ಸೂಕ್ತ ಆರೈಕೆ ಒದಗಿಸಲು ಗೋಶಾಲೆಗಳಿಗೆ ಸ್ಥಳಾಂತರಿಸಲು ಮೀಸಲಾದ ಹೆದ್ದಾರಿ ಗಸ್ತು ತಂಡವನ್ನು ಸ್ಥಾಪಿಸುವಂತೆ ಆದೇಶಿಸಿದೆ.
“ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀಡಾಡಿ ಜಾನುವಾರುಗಳ ಬಗ್ಗೆ ವರದಿ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಬೇಕು. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು,” ಎಂದು ನ್ಯಾಯಪೀಠ ತಿಳಿಸಿದೆ.
ಬೀದಿ ನಾಯಿ ಪ್ರಕರಣದ ಹಿನ್ನೆಲೆ
ಜುಲೈನಲ್ಲಿ ನೀಡಿದ್ದ ಆದೇಶದಲ್ಲಿ, ಹೆಚ್ಚುತ್ತಿರುವ ನಾಯಿ ಕಡಿತ ಮತ್ತು ರೇಬೀಸ್ ಸಾವುಗಳ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ವಸತಿ ಪ್ರದೇಶಗಳಿಂದ ಎಲ್ಲಾ ಆಕ್ರಮಣಕಾರಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು. ಈ ಆಶ್ರಯ ತಾಣಗಳಲ್ಲಿ ನಾಯಿಗಳನ್ನು ನಿಭಾಯಿಸಲು, ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಮತ್ತು ಲಸಿಕೆ ಹಾಕಲು ವೃತ್ತಿಪರರನ್ನು ನಿಯೋಜಿಸಬೇಕು. ಉಳಿದ ನಾಯಿಗಳನ್ನು ಲಸಿಕೆ ಹಾಗೂ ಸೂಕ್ತ ಚಿಕಿತ್ಸೆಯ ಬಳಿಕ ಅವುಗಳ ಮೂಲ ಸ್ಥಾನಕ್ಕೆ ತಂದು ಬಿಡಬೇಕು ಎಂದು ಸೂಚಿಸಿತ್ತು.
ಇದನ್ನೂ ಓದಿ: ರಷ್ಯಾದಲ್ಲಿ ಭಾರತದ ಮೂಲದ ವೈದ್ಯಕೀಯ ವಿದ್ಯಾರ್ಥಿ ನಿಗೂಢ ಸಾವು | ಡ್ಯಾಮ್‌ನಲ್ಲಿ ಮೃತದೇಹ ಪತ್ತೆ



















