ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ಯಮುನಾ ನದಿಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು, ರಸ್ತೆಗಳು ಮತ್ತು ವಸತಿ ಪ್ರದೇಶಗಳು ಮಾತ್ರವಲ್ಲದೇ ಪರಿಹಾರ ಶಿಬಿರಗಳೂ ಜಲಾವೃತಗೊಂಡಿದ್ದು, ಮೂಲಸೌಕರ್ಯಗಳು ಹಾನಿಗೊಳಗಾಗಿವೆ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿಯ ನೀರಿನ ಮಟ್ಟ 207.47 ಮೀಟರ್‌ಗೆ ತಲುಪಿದ್ದು, ಗುರುವಾರ ಬೆಳಿಗ್ಗೆಯಿಂದ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಸಿದ್ದಾರೆ.
ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿ ಸ್ಥಳಾಂತರಿಸಲ್ಪಟ್ಟವರಿಗಾಗಿ ಸ್ಥಾಪಿಸಲಾಗಿದ್ದ ಪರಿಹಾರ ಶಿಬಿರಗಳು ಕೂಡ ನೀರಿನಲ್ಲಿ ಮುಳುಗಿವೆ, ನಿವಾಸಿಗಳು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ.
ಅಲಿಪುರದಲ್ಲಿ, ರಾಷ್ಟ್ರೀಯ ಹೆದ್ದಾರಿ-44ರ ಸಮೀಪದ ಮೇಲ್ಸೇತುವೆಯ ಒಂದು ಭಾಗ ಕುಸಿದು, ಆಟೋರಿಕ್ಷಾವೊಂದು ಹಳ್ಳಕ್ಕೆ ಬಿದ್ದಿದೆ ಮತ್ತು ಚಾಲಕ ಗಾಯಗೊಂಡಿದ್ದಾನೆ.
ಪ್ರವಾಹದ ನೀರು ದೆಹಲಿ ಸಚಿವಾಲಯದ ಸಮೀಪದ ಅಂಡರ್‌ಪಾಸ್‌ಗೆ ನುಗ್ಗಿದ್ದು, ಆ ಮಾರ್ಗವನ್ನು ಮುಚ್ಚಲಾಗಿದೆ.

ನಗರದ ಅತಿದೊಡ್ಡ ಸ್ಮಶಾನವಾದ ನಿಗಮ್‌ಬೋಧ್ ಘಾಟ್ ಮತ್ತು ಗೀತಾ ಕಾಲೋನಿ ಸ್ಮಶಾನಗಳು ಜಲಾವೃತಗೊಂಡಿದ್ದು, ಅಂತ್ಯಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ. ಜನರು ಪಕ್ಕದ ಕಾಲುದಾರಿಯಲ್ಲೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವಂತಾಗಿದೆ.
ಮುಂಗೇಶಪುರ್ ಚರಂಡಿಯ ದಡ ಒಡೆದ ಹಿನ್ನೆಲೆಯಲ್ಲಿ, ನೈಋತ್ಯ ದೆಹಲಿಯ 2,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಹವಾಮಾನ ಮುನ್ಸೂಚನೆ:
ಭಾರತೀಯ ಹವಾಮಾನ ಇಲಾಖೆ (IMD) ದೆಹಲಿಯಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಪ್ರವಾಹದ ನಡುವೆ ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 57ಕ್ಕೆ ಇಳಿದು ‘ತೃಪ್ತಿದಾಯಕ’ ವರ್ಗಕ್ಕೆ ಬಂದಿದೆ.


















