ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಗಳ ಮಧ್ಯೆ ಕಿರಿಕ್ ನಡೆದಿರುವ ಘಟನೆ ನಡೆದಿದೆ. ಮನೆಗೆ ಪೆಟ್ರೊಲ್ ಸುರಿದು ದುರುಳರು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ 1 ರಂದು ಸಂಜೆ 5.30 ಸುಮಾರಿಗೆ ವಿವೇಕ ನಗರದಲ್ಲಿ ಈ ಘಟನೆ ನಡೆದಿದೆ.
ವೆಂಕಟರಮಣಿ ಮತ್ತು ಪುತ್ರ ಸತೀಶ್ ವಾಸವಿದ್ದ ಮನೆಗೆ ಸಂಬಂಧಿ ಸುಬ್ರಮಣಿ ಎಂಬುವವರು ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಸತೀಶ್ ಅವರ ಅತ್ತೆ ಮಗಳಾದ ಪಾರ್ವತಿ ತನ್ನ ಮಗಳು ಮಹಾಲಕ್ಷ್ಮಿ ಮದುವೆಗೆ 5 ಲಕ್ಷ ರೂ. ಸಾಲವನ್ನು ಸತೀಶ್ ತಾಯಿ ವೆಂಕಟರಮಣಿ ಬಳಿ ಪಡೆದಿದ್ದರು ಎನ್ನಲಾಗಿದೆ.
ಕಳೆದ ಏಳೆಂಟು ವರ್ಷದ ಹಿಂದೆ ಸಾಲ ಪಡೆದಿದ್ದ ಪಾರ್ವತಿ, ಇದುವರೆಗೂ ಮರು ಪಾವತಿ ಮಾಡಿರಲಿಲ್ಲ. ಇತ್ತೀಚೆಗೆ ಎರಡೂ ಕುಟುಂಬಗಳ ಮದುವೆ ಸಮಾರಂಭದಲ್ಲಿ ಭೇಟಿಯಾಗಿದ್ದವು. ಆ ವೇಳೆ ಕೂಡ ಪಾರ್ವತಿ ಬಳಿ ವೆಂಕಟರಮಣಿ ಹಣ ಕೇಳಿದ್ದರು. ಇದಕ್ಕೆ ಪಾರ್ವತಿ ಕೋಪಗೊಂಡಿದ್ದರು. ಇದರಿಂದ ಪಾರ್ವತಿ ಸಹೋದರನಿಗೂ ಕೋಪ ಬಂದಿದೆ.
ಸಾಲದ ಹಣ ನೀಡದಿದ್ದಕ್ಕೆ ಸತೀಶ್ ಮನೆಗೆ ಪೆಟ್ರೊಲ್ ಸುರಿದು ಪಾರ್ವತಿ ತಮ್ಮ ಸುಬ್ರಮಣಿ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಘಟನೆ ಸಂದರ್ಭದಲ್ಲಿ ಸತೀಶ್ ತಾಯಿ ವೆಂಕಟರಮಣಿ ಮತ್ತು ಸಹೋದರ ಮೋಹನ್ ದಾಸ್ ಇದ್ದರು. ಸ್ಥಳೀಯರು ಕೂಗಿಕೊಂಡ ಮೇಲೆ ಕೆಳಗೆ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮನೆಯ ಮುಂಭಾಗ ಮತ್ತು ಕಿಟಕಿ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ವಿವೇಕನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.