ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹೊಸ ‘ಎಲೆಕ್ಟ್ರಿಕ್ ವೆಹಿಕಲ್ (EV) ನೀತಿ 2026-2030’ರ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪೆಟ್ರೋಲ್ ವಾಹನಗಳ ಬಳಕೆಯನ್ನು ಹಂತಹಂತವಾಗಿ ನಿಲ್ಲಿಸುವ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ ಸಂಪೂರ್ಣ ಒತ್ತು ನೀಡುವ ನಿರ್ಧಾರವನ್ನು ಪ್ರಕಟಿಸಲಾಗಿದೆ. ವಿಶೇಷವಾಗಿ 2028ರ ನಂತರ ದೆಹಲಿಯಲ್ಲಿ ಯಾವುದೇ ಹೊಸ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.
ನಿರ್ಬಂಧಕ್ಕೆ ಗಡುವು ನಿಗದಿ
ಈ ನೂತನ ಕರಡು ನೀತಿಯ ಪ್ರಕಾರ, ದೆಹಲಿ ಸಾರಿಗೆ ಇಲಾಖೆಯು ವಿವಿಧ ವಾಹನ ವಿಭಾಗಗಳಿಗೆ ಕಟ್ಟುನಿಟ್ಟಿನ ಗಡುವನ್ನು ನಿಗದಿಪಡಿಸಿದೆ. 2027ರ ಜನವರಿ 1ರಿಂದ ಕೇವಲ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ನೋಂದಣಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕ, 2028ರ ಏಪ್ರಿಲ್ 1ರಿಂದ ಪೆಟ್ರೋಲ್ ದ್ವಿಚಕ್ರ ವಾಹನಗಳ ಹೊಸ ನೋಂದಣಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಅಷ್ಟೇ ಅಲ್ಲದೆ, 2026ರ ಜನವರಿ 1ರಿಂದ ಡೆಲಿವರಿ ಮತ್ತು ಇತರ ವಾಣಿಜ್ಯ ಉದ್ದೇಶದ ಅಗ್ರಿಗೇಟರ್ ಸೇವೆಗಳಲ್ಲಿ ಬಳಸುವ ಹೊಸ ವಾಹನಗಳು ಕೇವಲ ಎಲೆಕ್ಟ್ರಿಕ್ ಮಾದರಿಯದ್ದೇ ಆಗಿರಬೇಕು ಎಂಬ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಸರ್ಕಾರಿ ವಾಹನ, ಶಾಲಾ ಬಸ್‌ಗಳಿಗೂ ಇವಿ ಕಡ್ಡಾಯ
ಕೇವಲ ಸಾರ್ವಜನಿಕರ ವಾಹನಗಳಲ್ಲದೆ, ಸರ್ಕಾರಿ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳ ವಾಹನಗಳಿಗೂ ಇವಿ ನಿಯಮ ಅನ್ವಯವಾಗಲಿದೆ. ಇನ್ನು ಮುಂದೆ ಸರ್ಕಾರಿ ಇಲಾಖೆಗಳಿಗೆ ಖರೀದಿ ಮಾಡುವ ಅಥವಾ ಲೀಸ್ ಮೇಲೆ ಪಡೆಯುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಎಲೆಕ್ಟ್ರಿಕ್ ಆಗಿರಲಿವೆ. ಶಾಲಾ ಬಸ್‌ಗಳ ವಿಷಯದಲ್ಲಿ, 2030ರ ವೇಳೆಗೆ ಶೇ.30ರಷ್ಟು ಬಸ್‌ಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದೆ. ಅಂತಾರಾಜ್ಯ ಬಸ್‌ಗಳೂ ಸಹ ಹಂತಹಂತವಾಗಿ ಇವಿ ಅಥವಾ ಹೈಡ್ರೋಜನ್ ತಂತ್ರಜ್ಞಾನಕ್ಕೆ ಬದಲಾಗಲಿವೆ.
ಖರೀದಿದಾರರಿಗೆ ಆಕರ್ಷಕ ರಿಯಾಯಿತಿ, ಸಬ್ಸಿಡಿ
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಆರ್ಥಿಕ ನೆರವಿನ ಭರವಸೆಯನ್ನೂ ನೀಡಿದೆ. ಇವಿ ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಸರಕು ಸಾಗಣೆ ವಾಹನಗಳಿಗೆ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ ಸಿಗಲಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕುವವರಿಗೆ 10,000 ರೂ.ನಿಂದ 1 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ಸಿಗಲಿದೆ. ಇದರ ಜೊತೆಗೆ, ಇವಿ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ನೂರಕ್ಕೆ ನೂರರಷ್ಟು ವಿನಾಯಿತಿ ನೀಡುವ ಪ್ರಸ್ತಾಪ ಕರಡಿನಲ್ಲಿದೆ.
ಚಾರ್ಜಿಂಗ್ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ
ವಾಹನಗಳಿದ್ದರೂ ಚಾರ್ಜಿಂಗ್ ವ್ಯವಸ್ಥೆಯಿಲ್ಲ ಎಂಬ ದೂರುಗಳನ್ನು ಹೋಗಲಾಡಿಸಲು ‘ದೆಹಲಿ ಟ್ರಾನ್ಸ್‌ಕೋ ಲಿಮಿಟೆಡ್’ ಅನ್ನು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ನಗರದಾದ್ಯಂತ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಬ್ಯಾಟರಿ ಸ್ನ್ಯಾಪಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಏಕಗವಾಕ್ಷಿ ಅನುಮೋದನೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಅಲ್ಲದೆ, ವಾಹನ ತಯಾರಕರು ತಮ್ಮ ಡೀಲರ್‌ಶಿಪ್‌ಗಳಲ್ಲೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ. ಪ್ರಸ್ತುತ ಈ ಕರಡು ಪ್ರತಿಯನ್ನು ಸಾರ್ವಜನಿಕರ ಗಮನಕ್ಕೆ ಇಡಲಾಗಿದ್ದು, ಮುಂದಿನ 30 ದಿನಗಳವರೆಗೆ ಜನರು ಮತ್ತು ತಜ್ಞರು ತಮ್ಮ ಸಲಹೆಗಳನ್ನು ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಕಾಸ್ಮೋಸ್ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ – ಕೂಡಲೇ ಅರ್ಜಿ ಸಲ್ಲಿಸಿ



















