ಬೆಂಗಳೂರು: 56ನೇ ಜಿಎಸ್‌ಟಿ ಮಂಡಳಿ ಸಭೆ ನಡೆದಿದೆ, ಬಡವರಿಗೆ, ಯುವಕರಿಗೆ ಅನುಕೂಲ ಆಗಲು ಜಿಎಸ್ ಟಿ ಯಲ್ಲಿ ಸುಧಾರಣೆ ಮಾಡಿದ್ದಾರೆ. ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಜಿಎಸ್ ಟಿ ಸುಧಾರಣೆ ಬಗ್ಗೆ ಹೋದ ತಿಂಗಳು ದೇಶದ ಪ್ರಧಾನ ಮಂತ್ರಿಗಳು ಸ್ವತಂತ್ರ ದಿನಾಚರಣೆ ದಿನ ಕೆಂಪು ಕೋಟೆ ಮೇಲೆ ಹೇಳಿದ್ದರು. ವ್ಯಾಪಾರ ವಹಿವಾಟು ಸುಲಭವಾಗಲು ಸುಧಾರಣೆ ಆಗಿದ್ದು, ಇದರಿಂದ ತುಂಬ ದೊಡ್ಡ ಮಟ್ಟದಲ್ಲಿ ಚಿಕ್ಕ ಉದ್ಯಮ ಮತ್ತು ಎಮ್ ಎಸ್ ಎಮ್ ಇ ಗಳಿಗೆ ಸಹಾಯ ಆಗುತ್ತದೆ. ಜಿಎಸ್ ಟಿ ಬಂದ ಮೇಲೆ ತೆರಿಗೆ ಸಂಗ್ರಹಣೆ ಉತ್ತಮ ಆಗಿದ್ದು, ಸರಾಸರಿ ಶೇ.18 ರಷ್ಟು ವರ್ಷದಿಂದ ವರ್ಷಕ್ಕೆ ಜಿಎಸ್ ಟಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಜಿಎಸ್ ಟಿ ಸುಧಾರಣೆಯಲ್ಲಿ ವಿದ್ಯಾರ್ಥಿಗಳು ಬಳಸುವ ವಸ್ತುಗಳು ಮೇಲೆ 0 ಪರ್ಸೆಂಟ್ ಜಿಎಸ್ ಟಿ ವ್ಯಾಪ್ತಿಗೆ ತಂದಿದ್ದಾರೆ. ನಗರ ಭಾಗದಲ್ಲಿ ಮಕ್ಕಳನ್ನು ಓದಿಸುವುದು ಕಷ್ಟ ಆಗುತಿತ್ತು. ಇಂಥ ಸಂದರ್ಭದಲ್ಲಿ ಇದು ಉತ್ತಮ ಬೆಳವಣಿಗೆಯಾಗಿದೆ. ಪ್ರಧಾನ ಮಂತ್ರಿಗಳ ಈ ನಿರ್ಧಾರಕ್ಕೆ ಸ್ವಾಗತಿಸುವುದಾಗಿ ಹೇಳಿದ್ದಾರೆ.
ಕೃಷಿಗೆ ಬಳಸುವ ವಸ್ತುಗಳನ್ನು ಈಗ ಶೇ. 5ರಷ್ಟು ಮತ್ತು ಶೇ.12ಕ್ಕೆ ಇಳಿಸಲಾಗಿದ್ದು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ಹಾಗೂ ಮೆಡಿಕಲ್ ಇನ್ಸೂರೆನ್ಸ್ ಅನ್ನು ಶೇ. 0ಗೆ ಇಳಿಸಲಾಗಿದ್ದು, ನಾನು ದೇಶದ ಜನರಲ್ಲಿ ಆಗ್ರಹ ಮಾಡುತ್ತೇನೆ. ದಯವಿಟ್ಟು ಜೀವ ವಿಮೆ ಮಾಡಿಸಿ. ಇದರಿಂದ ಆರೋಗ್ಯ ಸಮಸ್ಯೆ ಬಂದಾಗ ಬೇರೆ ಅವರ ಹತ್ತಿರ ಕೈ ಚಾಚುವುದು ತಪ್ಪುತ್ತದೆ ಎಂದು ಮನವಿ ಮಾಡಿದ್ದಾರೆ.
ಬಡವರು ಬಳಸುವ ಎಣ್ಣೆ, ಹಾಲು ಹಾಗೂ ದಿನ ನಿತ್ಯ ಬಳಸುವ ವಸ್ತುಗಳ ಮೇಲೆ ಶೇ.5ಗೆ ಜಿಎಸ್ ಟಿ ಇಲಿಸಲಾಗಿದ್ದು, ಇದರಿಂದ ಜನರ ಕೊಳ್ಳುವಿಕೆ ಜಾಸ್ತಿ ಆಗುವುದರಿಂದ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ. ಬಟ್ಟೆಗಳ ಮೇಲೆ ಜಿಎಸ್ ಟಿ ಸುಧಾರಣೆ ಆಗಿದ್ದು, ದೇಶದ ಯುವಕರ ಉದ್ಯೋಗ ಜಾಸ್ತಿ ಆಗುತ್ತದೆ. ತಂಬಾಕು ವಸ್ತುಗಳ ಮೇಲೆ ಶೇ. 40ರಷ್ಟು ಜಿಎಸ್ ಟಿ ಹೆಚ್ಚಳ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ, ರಾಮ್ ಮೂರ್ತಿ, ವಿಧಾನ ಪರಿಷತ್ ಸದಸ್ಯ ನವೀನ್ ಉಪಸ್ಥಿತರಿದ್ದರು.