ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ(Champions Trophy 2025) ಭಾರತದ ಅಂಪೈರ್ ನಿತಿನ್ ಮೆನನ್ (Nitin Menon) ಪಾಲ್ಗೊಳ್ಳಲು ನಿರಾಕರಿಸಿದ ಬೆನ್ನಲ್ಲೇ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್(Javagal Srinath) ಕೂಡ ಹೋಗುವುದಿಲ್ಲ ಎಂದಿದ್ದಾರೆ. ನಿತಿನ್ ಮೆನನ್ ‘ವೈಯಕ್ತಿಕ ಕಾರಣ’ ನೀಡಿದರೆ, ಜಾವಗಲ್ ಶ್ರೀನಾಥ್ ಅವರು ʼಬಿಡುವು’ ಬೇಕೆಂದು ಮನವಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ ಕಾರಣದಿಂದಲೇ ಇವರಿಬ್ಬರೂ ಪಾಕ್‌ಗೆ ತೆರಳಲು ನಿರಾಕರಿಸಿದ್ದಾರೆ.. ಇನ್ನು, ಭಾರತದ ಮತ್ತೋರ್ವ ಅಂಪೈರ್ ಮದನಗೋಪಾಲ್ ಕೂಡಾ ಪಾಕ್‌ಗೆ ತೆರಳಲು ನಿರಾಕರಿಸಿದ್ದಾಗಿ ವರದಿಯಾಗಿದೆ. ಟೂರ್ನಿಯಲ್ಲಿ ಅಂಪೈರ್‌ಗಳಾಗಿ ಕುಮಾರ್ ಧರ್ಮಸೇನಾ, ಕ್ರಿಸ್ ಗ್ಯಾಫನಿ, ರಿಚರ್ಡ್ ಇಲ್ಲಿಂಗ್‌ವರ್ಥ್ ಸೇರಿ 12 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಡೇವಿಡ್ ಬೂನ್, ರಂಜನ್, ಆ್ಯಂಡ್ರ್ಯೂ ಪಿಕ್ರಾಫ್ಟ್ ರೆಫ್ರಿಗಳಾಗಿರಲಿದ್ದಾರೆ.
ಒಟ್ಟು 15 ಪಂದ್ಯಗಳ ಟೂರ್ನಿ
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.
ಭಾರತ(India vs Pakistan) ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್ ಪ್ರವೇಶಿಸಿದೆ ಈ ಪಂದ್ಯವನ್ನು ಕೂಡ ದುಬೈನಲ್ಲೇ ಆಡಲಿದೆ. ಭಾರತ ಫೈನಲ್ ತಲುಪದಿದ್ದರೆ ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ.