ಬೆಂಗಳೂರು: ಕೇಂದ್ರ ಸರ್ಕಾರಿ ನೌಕರಿ ಪಡೆಯಬೇಕು, ಕೈತುಂಬ ಸಂಬಳ ಎಣಿಸಬೇಕು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಕನಸು ಯಾರಿಗೆ ಇರುವುದಿಲ್ಲ ಹೇಳಿ? ಈ ಕನಸು ನನಸು ಮಾಡಿಕೊಳ್ಳಲು ಭಾರತೀಯ ರೈಲ್ವೆಯಲ್ಲಿ 32,438 ಡಿ ಗ್ರೂಪ್ ಹುದ್ದೆಗಳು ಖಾಲಿ ಇವೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು ಮಾರ್ಚ್ 1ಕ್ಕೆ ವಿಸ್ತರಣೆ ಮಾಡಲಾಗಿದೆ. ಇದಕ್ಕೂ ಮೊದಲು ಫೆಬ್ರವರಿ 22 ಕೊನೆಯ ದಿನವಾಗಿತ್ತು. ಈಗ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ ಮಾಡಿರುವ ಕಾರಣ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಅಪ್ಲೈ ಮಾಡಬಹುದಾಗಿದೆ.
ಕರ್ನಾಟಕದಲ್ಲಿ 503 ಹುದ್ದೆಗಳ ಭರ್ತಿ
ಫೆಬ್ರವರಿ 22ರ ರಾತ್ರಿ 11 ಗಂಟೆ 59 ನಿಮಿಷದವರೆಗೆ ಸಮಯ ಇರುವ ಕಾರಣ ಅಭ್ಯರ್ಥಿಗಳು ಕ್ಷಿಪ್ರವಾಗಿ ಅರ್ಜಿ ಸಲ್ಲಿಸಬೇಕಿದೆ. ಎಸ್ಸೆಸ್ಸೆಲ್ಸಿ, ಐಟಿಐ ಪಾಸಾದವರಿಗೆ ಹುದ್ದೆಗಳು ದೊರೆಯಲಿವೆ. ಅಸಿಸ್ಟಂಟ್, ಅಸಿಸ್ಟಂಟ್ ಕ್ಯಾರಿಯೇಜ್ ಆ್ಯಂಡ್ ವ್ಯಾಗನ್, ಅಸಿಸ್ಟಂಟ್ ಬ್ರಿಡ್ಜ್, ಅಸಿಸ್ಟಂಟ್ ಲೋಕೋ ಶೆಡ್, ಅಸಿಸ್ಟಂಟ್ ಟಿಎಲ್ ಆ್ಯಂಡ್ ಎಸಿ ಸೇರಿ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 32,438 ಹುದ್ದೆಗಳ ಪೈಕಿ ಕರ್ನಾಟಕದಲ್ಲಿ 503 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಕರ್ನಾಟಕ ಪ್ರಾದೇಶಿಕ ಪೋರ್ಟಲ್ ಆಗಿರುವ https://www.rrbbnc.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ 18 ವರ್ಷದಿಂದ ಗರಿಷ್ಠ 36 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಒಬಿಸಿಯವರಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವರ್ಗದವರಿಗೆ 5 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಈ ದಿನಾಂಕಗಳನ್ನು ಮರೆಯದಿರಿ
ಆನ್ ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 1 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಗೆ ಮಾರ್ಚ್ 3 ಕಡೆಯ ದಿನ. ಅರ್ಜಿ ತಿದ್ದುಪಡಿ, ಶುಲ್ಕ ತಿದ್ದುಪಡಿಗೆ ಮಾರ್ಚ್ 4ರವರೆಗೆ ಅವಕಾಶ ಇರುತ್ತದೆ. ಆನ್ ಲೈನ್ ಸಿಬಿಟಿ ಪರೀಕ್ಷೆ, ಪಿಇಟಿ, ಪಿಎಸ್ ಟಿ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.