ಹಾಸನ : ಹಾಸನಾಂಬ ದರ್ಶನೋತ್ಸವ ಆರಂಭಗೊಂಡು ಕೇವಲ ಒಂದೇ ವಾರದಲ್ಲಿ (8 ದಿನ) ಹೊಸ ಇತಿಹಾಸ ಸೃಷ್ಟಿಯಾಗಿದೆ. ಇಲ್ಲಿಯವರೆಗೂ 15,30,000 ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದುಕೊಂಡಿದ್ದಾರೆ.
ಕೇವಲ 8 ದಿನದಲ್ಲಿ ದೇವಾಲಯಕ್ಕೆ 10.5 ಕೋಟಿ ರೂ. ಆದಾಯ ಹರಿದು ಬಂದಿದ್ದು, ಇದು ದಾಖಲೆಯಾಗಿದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿರುವುದರಿಂದ ಭಕ್ತರು ಸುಗಮವಾಗಿ ದರ್ಶನ ಪಡೆಯುತ್ತಿದ್ದಾರೆ. ಇದರಿಂದಾಗಿ ಭಕ್ತರಲ್ಲಿ ಸಂತಸ ಮೂಡಿದೆ.
ಈಗಲೂ ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೇ ಹಾಸನಾಂಬೆಯ ದರ್ಶನಕ್ಕೆ ಹರಿದು ಬರುತ್ತಿದ್ದಾರೆ. ಇನ್ನೂ ಐದು ದಿನ ಹಾಸನಾಂಬ ಜಾತ್ರಾ ಮಹೋತ್ಸವ ಇದ್ದು, ಈ ಐದು ದಿನದಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದಾರೆ. ಇಂದು 1,60,000 ಭಕ್ತರಿಂದ ದರ್ಶನ ಮಾಡಿದ್ದು, ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಎಲ್ಲಾ ಸರತಿ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ನಾನೇ ಧರ್ಮ ದರ್ಶನದ ಸಾಲಿನಲ್ಲಿ ಬಂದು 3 ಗಂಟೆ ನಂತರ ದರ್ಶನ ಪಡೆದಿದ್ದೇನೆ. ಈಗ ಸಮಯ ಹೆಚ್ಚಾಗುತ್ತಿದೆ. ಕೆಲವು ಭಕ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಸಾಲಿನಲ್ಲಿ ನಿಂತವರು, ಸಂಜೆ 4 ಗಂಟೆಗೆ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.