ಬೆಳಗಾವಿ : ಉತ್ತರ ಕರ್ನಾಟಕದ ಶಕ್ತಿಪೀಠ ಎಂದೇ ಖ್ಯಾತಿ ಪಡೆದಿರುವ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಳೆದ ನಾಲ್ಕು ದಿನಗಳಿಂದ ನಡೆದ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಂಡಿದ್ದು, ಒಟ್ಟು 3.07 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಒಟ್ಟು ನಗದು: ₹2,78,49,000 (2.78 ಕೋಟಿ ರೂ.)
ಚಿನ್ನ: 100 ಗ್ರಾಂ ತೂಕದ ಚಿನ್ನಾಭರಣ (ಮಾರುಕಟ್ಟೆ ಮೌಲ್ಯ ಅಂದಾಜು ₹16.16 ಲಕ್ಷ)
ಬೆಳ್ಳಿ: 4 ಕೆಜಿ 547 ಗ್ರಾಂ ತೂಕದ ಬೆಳ್ಳಿ ಆಭರಣ (ಮಾರುಕಟ್ಟೆ ಮೌಲ್ಯ ಅಂದಾಜು ₹12.35 ಲಕ್ಷ)
ಮಾರ್ಚ್ 9 ರಿಂದ ಮಾರ್ಚ್ 12ರ ಅವಧಿಯಲ್ಲಿ ಸತತವಾಗಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕಳೆದ ವಾರವೂ ಹುಂಡಿ ಎಣಿಕೆ ನಡೆದಿತ್ತು, ಆದರೆ ಈ ವಾರದ ಎಣಿಕೆಯಲ್ಲಿ ದಾಖಲೆ ಮಟ್ಟದ ಕಾಣಿಕೆ ಬಂದಿರುವುದು ವಿಶೇಷ. ದೇವಸ್ಥಾನದ ಸಿಬ್ಬಂದಿಯೊಂದಿಗೆ ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪಾರದರ್ಶಕವಾಗಿ ಎಣಿಕೆ ಪ್ರಕ್ರಿಯೆ ನಡೆಸಲಾಗಿದೆ.
ಸಂಗ್ರಹವಾಗಿರುವ ಈ ಬೃಹತ್ ಮೊತ್ತವನ್ನು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು, ದಾಸೋಹ ಭವನ ಹಾಗೂ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ದೇವಸ್ಥಾನದ ಆಡಳಿ ಮಂಡಳಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ಮಾರ್ಗಸೂಚಿ – ಪಿಚ್ ರಕ್ಷಣೆಗೆ ಮಾಸ್ಟರ್ ಪ್ಲಾನ್!



















