ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಕಣ್ಣಪ್ಪ ಚಿತ್ರದಿಂದ ದೊಡ್ಡ ಅಪ್ಡೇಟ್ ಹೊರ ಬಿದ್ದಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದನ್ನು ಕಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕಣ್ಣಪ್ಪ ಚಿತ್ರದಲ್ಲಿ ನಟ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯಿಸಿದ್ದಾರೆ. ಇಂದು ಫೆ. 3ರಂದು ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್ ಅವರ ಫಸ್ಟ್ ಲುಕ್ ನ್ನು ಚಿತ್ರ ತಂಡ ರಿವೀಲ್ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿಯೇ ಬಹು ನಿರೀಕ್ಷೆ ಹುಟ್ಟು ಹಾಕಿರುವ ಕಣ್ಣಪ್ಪ ಚಿತ್ರದಲ್ಲಿ ಸ್ಟಾರ್ ತಾರಾಗಣವಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಬಹುತೇಕ ಇಂಡಸ್ಟ್ರಿಯ ಕಲಾವಿದರು ನಟಿಸಿದ್ದಾರೆ. ಆದರೆ, ಪ್ರಭಾಸ್ ಅವರ ಪಾತ್ರ ಎಲ್ಲರನ್ನೂ ಸಳೆಯುವಂತಿದೆ. ಇದೀಗ ಪ್ರಭಾಸ್, ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಮೊದಲ ಲುಕ್ ಅನಾವರಣಗೊಂಡಿದ್ದು, ರುದ್ರನ ಅವತಾರದಲ್ಲಿ ಪ್ರಭಾಸ್ ರಗಡ್ ಆಗಿಯೇ ಕಂಡಿದ್ದಾರೆ.
ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿ ಕೋಲು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹೆಗಲಿಗೆ ಕೇಸರಿ ವಸ್ತ್ರ ಧರಿಸಿ, ಹಣೆಗೆ ವಿಭೂತಿ ಧರಿಸಿ ಮಂದಹಾಸದ ನಗುವಿನಲ್ಲಿಯೇ ರುದ್ರನ ಪಾತ್ರ ಕಂಡಿದೆ. ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಹೊಸ ಲೋಕದ ಪರಿಚಯ ಮಾಡಿಕೊಡಲು ಚಿತ್ರ ತಂಡ ತುದಿಗಾಲ ಮೇಲೆ ನಿಂತಿದೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ವಿಷ್ಣು ಮಂಚು ಅವರ ತಂದೆ ಎಂ. ಮೋಹನ್ ಬಾಬು ನಿರ್ಮಾಣ ಮಾಡಿದ್ದಾರೆ. ಇದಕ್ಕೂ ಮೊದಲು, ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪೋಸ್ಟರ್‌ವೊಂದನ್ನು ಕಣ್ಣಪ್ಪ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಸಿನಿಮಾ ಮೂಲಕ ಅವರು ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ರುದ್ರನಾಗಿ ಪ್ರಭಾಸ್ ಪಾತ್ರ ರಿವೀಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.