ಬೆಂಗಳೂರು: ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ 9 ಜನ ಬಾಣಂತಿಯರಿಗೆ ಸಮಸ್ಯೆ ಆಗಿತ್ತು. ಈ ಪೈಕಿ ಈಗ ಕೆಲವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ಬಾಣಂತಿ ಚಿಕಿತ್ಸೆ ಪಡಿಯುತ್ತಿದ್ದವರು ಮೃತಪಟ್ಟಿದ್ದಾರೆ. ಇಂತಹ ಪ್ರಕರಣದಲ್ಲಿ ವಿಪಕ್ಷಗಳ ಬೆಂಬಲ ಕೂಡ ಬೇಕಾಗಿರುತ್ತದೆ. ಆದರೆ, ಇಂತಹ ಪ್ರಕರಣ ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ಯಾರೇ ಅಧಿಕಾರದಲ್ಲಿದ್ದರೂ ಇಂತಹ ಪ್ರಕರಣಗಳು ನಡೆಯಬಾರದು. ಈ ಪ್ರಕರಣದಲ್ಲಿ ನನ್ನ ತಪ್ಪಿದ್ದರೆ, ರಾಜೀನಾಮೆ ನೀಡುವುದಕ್ಕೂ ನಾನು ಸಿದ್ಧ. ಆದರೆ, ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಈಗಾಗಲೇ ಕಂಪೆನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವಲ್ಲಿ ನಮ್ಮ ಕಾನೂನುಗಳು ವಿಫಲವಾಗಿವೆ ಎಂದರು.
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಕುರಿತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಸ್ತೃತವಾಗಿ ಈಗಾಗಲೇ ಸಭೆ ನಡೆಸಲಾಗಿದೆ. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಲ್ಯಾಬ್ ಟೆಸ್ಟಿಂಗ್ ವರದಿ ಬರಬೇಕಾಗಿದೆ ಎಂದು ಹೇಳಿದ್ದಾರೆ.