ಬೆಂಗಳೂರು : ”ಟನಲ್ ರಸ್ತೆ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್ಬಾಗ್ ಬಳಿ ಪ್ರವೇಶ-ನಿರ್ಗಮನ ತಾಣ ರೂಪಿಸಲಾಗುವುದು” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಟನಲ್ ರಸ್ತೆ ವಿರೋಧಿಸಿ ಅಶೋಕ್ ಅವರು ಧರಣಿ ಕುಳಿತುಕೊಳ್ಳುವ ಅವಶ್ಯಕತೆಯಿಲ್ಲ. ಅವರು ಬೆಂಗಳೂರಿನವರು, ಇಲ್ಲಿಂದ ಏಳೆಂಟು ಬಾರಿ ಗೆದ್ದಿದ್ದಾರೆ. ಅವರಿಗೂ ಜವಾಬ್ದಾರಿಯಿದೆ. ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯೇ ಸರ್ಕಾರಕ್ಕೆ ಸಲಹೆ, ನಿರ್ದೇಶನ ನೀಡಲಿ. ಟನಲ್ ಯೋಜನೆಯನ್ನು ಅವರೂ ಗಮನಿಸಲಿ. ಅಶ್ವತ್ಥನಾರಾಯಣ ಸೇರಿ ಬೇರೆ ಯಾರ ಹೆಸರನ್ನು ಸೂಚಿಸಿದರೂ ಅವರನ್ನು ಈ ಸಮಿತಿಗೆ ಸೇರ್ಪಡೆ ಮಾಡಲಾಗುವುದು. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು, ಮಾಡೋಣ” ಎಂದು ಹೇಳಿದ್ದಾರೆ.
”ನಾನು ಶುಕ್ರವಾರ ರಾತ್ರಿ ಲಾಲ್ಬಾಗ್ ಬಳಿ ತೆರಳಿ ಎಲ್ಲೆಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸಬಹುದು ಎಂದು ಪರಿಶೀಲನೆ ಮಾಡಿದ್ದೇನೆ. ಪರ್ಯಾಯ ಮಾರ್ಗಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದೇನೆ. ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲ” ಎಂದ ಡಿಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ : 7300mAh ದೈತ್ಯ ಬ್ಯಾಟರಿಯ ಫೋನ್‌ಗಳು: ನವೆಂಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಟಾಪ್ 4 ಸ್ಮಾರ್ಟ್‌ಫೋನ್‌ಗಳು!



















