ಬೆಂಗಳೂರು: ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಹೈ ಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದವಾಗಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿ, ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ವಿಚಾರ ಜೋರಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಕಂದಾಯ ಸಚಿವ ಕೃಷ್ಣಭೈರೇಗೌಡ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಭೈರೇಗೌಡ, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶಗಳನ್ನು ನೀಡಿದೆ. ನನ್ನನ್ನು ಗುರುತಿಸಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ. ಸಚಿವ ಸ್ಥಾನದ ತ್ಯಾಗಕ್ಕೆ ಸಿದ್ದ ಎಂದು ಹೇಳಿದ್ದಾರೆ.
ಇನ್ನೂ ಇದೇ ವೇಳೆ ಹಾಸನಾಂಬೆ ದೇವಿ ದರ್ಶನದ ಕುರಿತು ಮಾತನಾಡಿ, ಈ ಭಾರಿ 26 ಲಕ್ಷ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ಹಾಸನಾಂಬ ದೇವಿ ಎಂದರೆ ಹಸನ್ಮುಖಿ, ಪ್ರಸನ್ನತೆಯ ಸಂಕೇತ. ದೇವಿಯ ದರ್ಶನ ಪಡೆದ ಭಕ್ತರು ಸಂತೋಷದಿಂದ ಹೋಗಿದ್ದಾರೆ. ದರ್ಶನ ಪಡೆದ 26 ಲಕ್ಷ ಭಕ್ತರ ಪೈಕಿ ಶೇ 60ರಷ್ಟು ಮಹಿಳೆಯರು ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆಯಿಂದಾಗಿ ಹೆಚ್ಚಿನ ಭಕ್ತರು ಬರಲು ಸಾಧ್ಯವಾಗಿದೆ. ದೇವರು ಯಾರ ಮನೆಯ ಸ್ವತ್ತು ಕೂಡ ಅಲ್ಲ. ಸಾಮಾನ್ಯರೆಲ್ಲರಿಗೂ ದರ್ಶನ ಸಿಗುವಂತೆ ಮಾಡಿದ್ದೇವೆ ಎಂದು ಹೇಳಿದ್ದಾರೆ.



















