ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಬೀದಿ ಬದಿ ಮಾರಾಟ ಮಾಡುತ್ತಿದ್ದ ಆಹಾರಗಳ ಗುಣಮಟ್ಟದ ಮೇಲೆ ಇತ್ತೀಚೆಗೆ ಕಣ್ಣಿಟ್ಟಿದೆ. ಹೀಗಾಗಿ ಈಗಾಗಲೇ ಗೋಬಿ, ಪಾನಿಪುರಿ ಸೇರಿದಂತೆ ಹಲವು ತಿಂಡಿಗಳು ಬ್ಯಾನ್ ಆಗಿವೆ. ಅವುಗಳಲ್ಲಿ ಬಳಕೆ ಮಾಡುತ್ತಿದ್ದ ಮಸಾಲೆ ಪದಾರ್ಥ ಹಾಗೂ ಕಲರ್ ಗಳು ಆರೋಗ್ಯಕ್ಕೆ ಹಾನಿಕಾರ ಎಂದು ಹೇಳಿ ಬ್ಯಾನ್ ಮಾಡಲಾಗಿತ್ತು. ಈಗ ಮತ್ತೊಮ್ಮೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪಕ್ಕದ ರಾಜ್ಯ ಕೇರಳದಿಂದ ಆಮದು ಆಗುವ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಇವುಗಳನ್ನು ಸೇವಿಸುವುದು ಹಾನಿಕಾರಕ ಎಂದು ಹೇಳಿದ್ದಾರೆ.
ಮೂರು ತಿಂಗಳುಗಳಲ್ಲಿ ಕೇರಳದಿಂದ ರಾಜ್ಯದ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫೂಟ್ಸ್ಗಳು, ಸಿಹಿತಿಂಡಿಗಳು ಸೇರಿದಂತೆ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ 31 ಮಾದರಿಗಳಿಗೆ ಕೃತಕ ಬಣ್ಣಗಳನ್ನು ಬಳಸಿರುವುದು ಪತ್ತೆಯಾಗಿದೆ. ಅಲ್ಲದೇ, ಕೆಲವು ಪದಾರ್ಥಗಳ ಮೇಲೆ ವಿವರಗಳು ಇಲ್ಲದೆ ಇರುವುದು, ತಯಾರಿಕಾ ದಿನಾಂಕವನ್ನು ನಮೂದು ನೊಂದಣಿ, ಪರವಾನಿಗೆ ಸಂಖ್ಯೆ ಮುದ್ರಿತವಾಗಿಲ್ಲ.
ಹೀಗಾಗಿ ಇವುಗಳ ಸೇವನೆ ಹಾನಿಕಾರಕ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಈ ಪದಾರ್ಥಗಳನ್ನು ತಯಾರಿಸುವ ತಯಾರಿಕ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗಣಮಟ್ಟ ಇಲಾಖೆ ಆಯುಕ್ತರಿಗೆ ಮತ್ತು ಕೇರಳ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಪತ್ರ ಬರೆದು ತಿಳಿಸಿದ್ದಾರೆ.