:
ಬೆಂಗಳೂರು: ಈ ಬಾರಿಯೂ ಐಪಿಎಲ್ನ ನೆಚ್ಚಿನ ತಂಡವಾದ ಆರ್‌ಸಿಬಿ(RCB) ಅಭಿಮಾನಿಗಳಿಗಾಗಿ ತನ್ನ ತವರು ಮೈದಾನದಲ್ಲಿ ‘ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್’ (RCB Unbox 2025) ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮ ಸೋಮವಾರ(ಮಾ.17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಿಂದಿನ ಹಲವು ಬಾರಿಯಂತೆ ಈ ಬಾರಿಯೂ ಹಲವಾರು ವೈವಿಧ್ಯಮಯ ಕಾರ್ಯಕ್ರಮದ ನಿರೀಕ್ಷೆಯಿದೆ.
ಪ್ರತಿಬಾರಿಯಂತೆ ವಿರಾಟ್ ಕೊಹ್ಲಿ(Virat Kohli) ಕಾರ್ಯಕ್ರಮದ ಕೇಂದ್ರ ಬಿಂದು ಎಂದು ಹೇಳಲಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಮತ್ತು ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೊಹ್ಲಿಗೆ ವಿಶೇಷ ಸನ್ಮಾನ ಮಾಡುವ ಸಾಧ್ಯತೆ ಇದೆ. ಇದು ಕಾರ್ಯಕ್ರಮದಲ್ಲಿ ಗಮನ ಸೆಳೆಯಲಿದೆ. ಜತೆಗೆ ತಂಡದ ನೂತನ ಜೆರ್ಸಿ ಕೂಡ ಬಿಡುಗಡೆ ಮಾಡಲಿದೆ.
ಟಿಕೆಟ್ ಅನ್ಸೋಲ್ಡ್
ಮಧ್ಯಾಹ್ನ 3:30ರಿಂದ ಅದ್ಧೂರಿ ಕಾರ್ಯಕ್ರಮ ಆರಂಭವಾಗಲಿದೆ. ಟಿಕೆಟ್‌ಗಳಿಗೆ ಕನಿಷ್ಠ ₹800ರಿಂದ ಗರಿಷ್ಠ ₹5000 ವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಆದರೆ ಒಂದೇ ಗಂಟೆಯಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಅಭಿಮಾನಿಗಳು ಲೈವ್ ಸ್ಟ್ರೀಮಿಂಗ್ ವೀಕ್ಷಿಸಲು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಒಬ್ಬರು 99 ರೂ ಚಂದಾದಾರಿಕೆ ಶುಲ್ಕ ಪಾವತಿಸಿದರೆ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ.
ಕಳೆದ ವರ್ಷ ರಾಯಲ್ ಚಾಲೆಂಜರ್ ಬ್ಯಾಂಗಳೂರ್ ಹೆಸರನ್ನು ರಾಯಲ್ ಚಾಲೆಂಜರ್ ಬೆಂಗಳೂರು ಎಂದು ಬದಲಾಯಿಸಲಾಗಿತ್ತು. ಇದರ ಜತೆಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಕಪ್ ಗೆದ್ದ ಆರ್‌ಸಿಬಿ ತಂಡವನ್ನು ಪುರುಷರ ತಂಡ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಲಾಗಿತ್ತು. ಹೀಗಾಗಿ ಕಾರ್ಯಕ್ರಮ ಸಿಕ್ಕಾಪಟ್ಟೆ ಕಳೆಗಟ್ಟಿತ್ತು. ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು.

ಐಪಿಎಲ್ನ ಹಾಲಿ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. 2024ರ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಮಾ. 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡೂ ತಂಡಕ್ಕೆ ಹೊಸ ನಾಯಕರಾಗಿರುವ ಕಾರಣ ಕುತೂಹಲ ಮೂಡಿದೆ.
ಪಾಟೀದಾರ್ಗೆ ನಾಯಕತ್ವ
ರಜತ್ ಪಾಟಿದಾರ್ ಅವರು ಆರ್‌ಸಿಬಿ ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಯುವ ಆಟಗಾರನ ಮೇಲೆ ಸಿಕ್ಕಾಪಟ್ಟೆ ಹೊಣೆಗಾರಿಕೆಯಿದೆ. 2022ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಆರ್‌ಸಿಬಿ ಎರಡು ಬಾರಿ ಪ್ಲೇಆಫ್ಸ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫಾಫ್ ನಾಯಕತ್ವದಲ್ಲಿ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಇಂದೋರ್ ಮೂಲದ ರಜತ್ ಪಾಟಿದಾರ್‌ಗೆ ನಾಯಕತ್ವದ ಹೊಣೆಯನ್ನು ನೀಡಿದೆ.