ಬೆಂಗಳೂರು: ಎರಡೂವರೆ ತಿಂಗಳ ಹಿಂದೆ ನಡೆದ ಕಾಲ್ತುಳಿತಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡ ಪರಿಹಾರ ಘೋಷಣೆ ಮಾಡಿದೆ.
ಜೂನ್ 4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರ ಭಾಗದಲ್ಲಿ ಆರ್. ಸಿ. ಬಿ ವಿಜಯೋತ್ಸವದ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಮಂದಿ ಆರ್.ಸಿ.ಬಿ ಅಭಿಮಾನಿಗಳ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಣೆ ಮಾಡಿದೆ.
ಆರ್.ಸಿ.ಬಿ ಫ್ರಾಂಚೈಸಿಯ ಅಧಿಕೃತ ಖಾತೆಗಳಾದ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಇಂದು(ಶನಿವಾರ), ಹೊಸದಾಗಿ ಪ್ರಾರಂಭಿಸಲಾದ ಸಾಮಾಜಿಕ ಉಪಕ್ರಮವಾದ ಆರ್‌ಸಿಬಿ ಕೇರ್ಸ್ ಅಡಿಯಲ್ಲಿ ಮಾಡಲಾಗಿದೆ.
ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ ಸಂಭ್ರಮವನ್ನು ಆಚರಿಸಿದ ಆರ್ ಸಿಬಿ ತಂಡ ಬೆಂಗಳೂರಿಗೆ ಆಗಮಿಸಿತ್ತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂ ಹೊರ ಭಾಗದಲ್ಲಿ ಲಕ್ಷಾಂತರ ಜನ ಸೇರಿದ್ದರು. ಕ್ರೀಡಾಂಗಣದ ದ್ವಾರಗಳ ಕಡೆಗೆ ಅಭಿಮಾನಿಗಳ ಅನಿಯಂತ್ರಿತ ನುಗ್ಗುವಿಕೆಯ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದರು, 50 ಕ್ಕೂ ಹೆಚ್ಚು ಜನರು ಈ ಸಂದರ್ಭದಲ್ಲಿ ಗಾಯಗೊಂಡಿದ್ದರು.
ಜೂನ್‌ನಲ್ಲಿ ಆರ್‌ಸಿಬಿ ಆರಂಭಿಕ ಘೋಷಣೆಗಿಂತ ಈಗ ಗಮನಾರ್ಹ ಹೆಚ್ಚಳ ಮಾಡಿದೆ. ಆಗ ಫ್ರಾಂಚೈಸಿ ದುಃಖಿತ ಕುಟುಂಬಗಳಿಗೆ 10 ಲಕ್ಷ ರೂ.ಗಳನ್ನು ಮತ್ತು ಆರ್‌ಸಿಬಿ ಕೇರ್ಸ್ ನಿಧಿಯನ್ನು ರಚಿಸುವ ಮೂಲಕ ಗಾಯಾಳುಗಳಿಗೆ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿತ್ತು.