ಚೆನ್ನೈ: 18ನೇ ಆವೃತ್ತಿಯ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೋಲಿಸುವುದರ ಮೂಲಕ ಆರ್ ಸಿಬಿ ಐತಿಹಾಸಿಕ ಜಯ ಕಂಡಿದೆ.
ಈ ಗೆಲುವಿನ ಮೂಲಕ ಆರ್ ಸಿಬಿ 17 ವರ್ಷಗಳ ಬಳಿಕ ಚೆನ್ನೈ ನೆಲದಲ್ಲಿ ಗೆದ್ದ ಇತಿಹಾಸ ಬರೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತ್ತು. ಈ ಕಠಿಣ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಕ್ಸ್ ತಂಡ 8 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿ 50 ರನ್ ಗಳಿಂದ ಸೋಲು ಕಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಕೂಡ ಆರಂಭಿಕ ಆಘಾತ ಕಂಡಿತು. ರಾಹುಲ್ ತ್ರಿಪಾಠಿ 5 ರನ್ ಗಳಿಸಿ ಔಟ್ ಆದರೆ, ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಬಲಿಯಾದರು. ದೀಪಕ್ ಹೂಡಾ 4, ಸ್ಯಾಮ್ ಕರನ್ 8, ಶಿವಂ ದುಬೆ 19 ರನ್ ಗಳಿಸಿದರು. ಸ್ವಲ್ಪ ಮಟ್ಟಿಗೆ ಪ್ರತಿರೋಧ ಒಡ್ಡಿದ ರವೀಂದ್ರ ಜಡೇಜಾ 25, ರವಿಚಂದ್ರನ್ ಅಶ್ವಿನ್ 11 ರನ್ ಗಳಿಸಿದರು.
8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಎಂ.ಎಸ್. ಧೋನಿ 16 ಬೌಲ್ ಎದುರಿಸಿ 30 ರನ್ ಗಳಿಸಿ, ಸೋಲಿನಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಿದರು. ಆದರೂ ತಂಡ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್ ಮಾತ್ರ ಗಳಿಸಿ ಸೋಲು ಕಂಡಿತು. ಆರ್ ಸಿಬಿ ಪರ ಜೋಶ್ ಹ್ಯಾಜಲ್ ವುಡ್ 3, ಲೈಮ್ ಲೈವಿಂಗ್ ಸ್ಟೋನ್ 2, ಯಶ್ ದಯಾಳ್ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಉತ್ತಮ ಆರಂಭ ಪಡೆಯಿತು. ಫಿಲ್ ಸಾಲ್ಟ್ 32, ವಿರಾಟ್ ಕೊಹ್ಲಿ 31 ರನ್ ಗಳಿಸಿದರು. ದೇವದತ್ತ ಪಡಿಕ್ಕಲ್ 27 ಗಳಿಸಿದರು. ತಂಡ ಒತ್ತಡದಲ್ಲಿದ್ದ ವೇಳೆ ನಾಯಕ ರಜತ್ ಪಾಟಿದಾರ್ 51 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಆಸರೆಯಾದರು. ಕೊನೆಯಲ್ಲಿ ಟೀಮ್ ಡೇವಿಡ್ 22 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಚೆನ್ನೈ ಪರ ನೂರ್ ಅಹ್ಮದ್ 3, ಮತೀಶ್ ಪಥೀನಾ 2, ಖಲೀಲ್ ಅಹ್ಮದ್, ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.