ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ 10 ವರ್ಷಗಳ ನಂತರ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡ 10 ವರ್ಷಗಳ ನಂತರ ರಾಯಲ್ ಜಯ ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. 222 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿ ಸೋಲು ಕಂಡಿತು.
ಕೊನೆಯ ಓವರ್ ನಲ್ಲಿ ಗೆಲ್ಲುವುದಕ್ಕೆ ಮುಂಬೈ ತಂಡಕ್ಕೆ 19 ರನ್ ಗಳ ಅಗತ್ಯವಿತ್ತು. ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿದ್ದರೆ, ಮಿಚೆಲ್ ಸ್ಯಾಂಟ್ನರ್ ಸ್ಟ್ರೈಕ್‌ನಲ್ಲಿದ್ದರು. ಸ್ಯಾಂಟ್ನರ್ ಸಿಕ್ಸರ್ ಸಿಡಿಸಲು ಪ್ರಯತ್ನಿಸಿ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿದರು. ಎರಡನೇ ಬೌಲ್ ಕೂಡ ಔಟ್ ಆಯಿತು. 3 ಎಸೆತದಲ್ಲಿ 1 ರನ್ ಗಳಿಸಿತು. 4ನೇ ಎಸೆತದಲ್ಲಿ ನಮನ್ ಧೀರ್ ಬೌಂಡರಿ ಬಾರಿಸಿದರು. 5ನೇ ಎಸೆತದಲ್ಲಿ ನಮನ್ ಕ್ಯಾಚ್ ನೀಡಿದರೆ, ಕೊನೆಯ ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ. ಹೀಗಾಗಿ ಮುಂಬೈ ತಂಡ 12 ರನ್ ಗಳ ಸೋಲು ಕಂಡಿತು. ಈ ಮೂಲಕ ಆರ್ ಸಿಬಿ ಮತ್ತೆ ಜಯದ ಲಯಕ್ಕೆ ಮರಳಿತು.
ಒಂದು ಹಂತದಲ್ಲಿ ಮುಂಬೈ ತಂಡದಿಂದ ಪಂದ್ಯ ಕೈ ಬಿಟ್ಟು ಹೋದಾಗ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಜೋಡಿ ಮತ್ತೆ ಗೆಲುವಿನ ಆಸೆ ಚಿಗುರಿಸಿದ್ದರು. ತಿಲಕ್ ವರ್ಮಾ 18ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್ ಗಳಿಸಲು ಯತ್ನಿಸಿ ಕ್ಯಾಚ್ ನೀಡಿ ಔಟಾದರು. 19ನೇ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಹೀಗಾಗಿ ತಂಡ ಮತ್ತೆ ಸೋಲಿನ ಹಾದಿ ಹಿಡಿಯಿತು.
ಮುಂಬೈ ಪರ ಹಾರ್ದಿಕ್ ಪಾಂಡ್ಯ 42 ರನ್ (15 ಎಸೆತ, 4 ಸಿಕ್ಸರ್, 3 ಬೌಂಡರಿ), ತಿಲಕ್ ವರ್ಮಾ 56 ರನ್ (29 ಎಸೆತ, 4 ಸಿಕ್ಸರ್, 45 ಬೌಂಡರಿ), ಸೂರ್ಯಕುಮಾರ್ ಯಾದವ್ 28 ರನ್, ವಿಲ್ ಜಾಕ್ಸ್ 22 ರನ್, ರೋಹಿತ್ ಶರ್ಮಾ, ರಿಕಲ್ಟನ್ ತಲಾ 17 ರನ್ ಗಳಿಸಿದರು. ಆರ್ ಸಿಬಿ ಪರ ಕೃನಾಲ್ ಪಾಂಡ್ಯ 4, ಯಶ್ ದಯಾಳ್, ಜೋಶ್ ಹೇಜಲ್ವುಡ್ ತಲಾ 2 ವಿಕೆಟ್, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದು ಮಿಂಚಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಮುಂಬೈ ವಿರುದ್ಧ ಅಧಿಕಾರ ಚಲಾಯಿಸಿತು. ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಜಿತೇಶ್ ಶರ್ಮಾ ಉತ್ತಮ ಪ್ರದರ್ಶನ ತೋರಿದರು. ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 67 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿದ್ರೆ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರಜತ್ ಪಾಟೀದಾರ್ 32 ಎಸೆತಗಳಲ್ಲಿ ಸ್ಪೋಟಕ 64 ರನ್ (5 ಬೌಂಡರಿ, 4 ಸಿಕ್ಸರ್) ಚಚ್ಚಿದರು. ಜಿತೇಶ್ ಶರ್ಮಾ 19 ಎಸೆತಗಳಲ್ಲಿ ಸ್ಫೋಟಕ 40 ರನ್ (4 ಸಿಕ್ಸರ್, 2 ಬೌಂಡರಿ) ಸಿಡಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ದೇವದತ್ ಪಡಿಕಲ್ 37 ರನ್ ಗಳಿಸಿ ಮಿಂಚಿದರು.