ಬೆಂಗಳೂರು: ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್ ಬಿಎಫ್ ಸಿ), ಗ್ರಾಮೀಣ ಬ್ಯಾಂಕುಗಳಲ್ಲಿ ಚಿನ್ನವನ್ನು ಅಡವಿಟ್ಟು, ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಇದಕ್ಕಾಗಿ, ಕೇಂದ್ರೀಯ ಬ್ಯಾಂಕ್ ಈಗ ಕರಡು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆರ್ ಬಿಐ ಪ್ರಮುಖವಾಗಿ, ಲೋನ್ ಟು ವ್ಯಾಲ್ಯೂ ರೇಷಿಯೋ (ಎಲ್ ಟಿವಿ) ಪ್ರಮಾಣವನ್ನು ಇಳಿಕೆ ಮಾಡಲು ಆರ್ ಬಿಐ ಚಿಂತನೆ ನಡೆಸಿದೆ. ಮೊದಲು ಅಡಮಾನ ಇರಿಸುವ ಚಿನ್ನದ ಮೌಲ್ಯದಲ್ಲಿ ಶೇ.90ರಷ್ಟು ಮೊತ್ತವನ್ನು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಸಾಲವಾಗಿ ನೀಡಬಹುದಿತ್ತು. ಆದರೆ, ಈಗ ಎಲ್ ಟಿವಿಯನ್ನು ಶೇ.75ಕ್ಕೆ ಇಳಿಸುವ ಚಿಂತನೆ ನಡೆಸಿದೆ. ಅಂದರೆ, ಸಾಲ ಪಡೆಯುವವರು 50 ಗ್ರಾಂ ಚಿನ್ನವನ್ನು ಅಡಮಾನ ಇಡುವಾಗ, 50 ಗ್ರಾಂ ಚಿನ್ನದ ಒಟ್ಟು ಮೌಲ್ಯದಲ್ಲಿ ಶೇ.75ರಷ್ಟು ಮೊತ್ತ ಮಾತ್ರ ಸಾಲವಾಗಿ ಸಿಗುತ್ತದೆ.
ಮೇಲಾಧಾರವಾಗಿ ಇಟ್ಟಿರುವ ಆಭರಣಗಳು ಯಾರಿಗೆ ಸೇರಿದ್ದು ಎಂಬುದರ ಕುರಿತು ಸಾಲದಾತರಿಗೆ ಯಾವುದೇ ಸಂದೇಹವಿದ್ದರೆ ಸಾಲ ನೀಡಬಾರದು. ಸಾಲದಾತರು ಸಾಲದ ಬಳಕೆಯನ್ನು ನಿಯತಕಾಲಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪುರಾವೆಗಳನ್ನು ದಾಖಲೆಯಲ್ಲಿಡಲು ವ್ಯವಸ್ಥೆ ರೂಪಿಸಬೇಕು. ಸಾಲಗಾರರು ಬಳಕೆ ಮತ್ತು ಆದಾಯ ಗಳಿಕೆಯ ಉದ್ದೇಶಗಳಿಗಾಗಿ ಏಕಕಾಲದಲ್ಲಿ ಸಾಲ ಪಡೆಯಬಾರದು ಎಂಬುದು ಸೇರಿ ಹಲವು ಮಾರ್ಗಸೂಚಿಗಳನ್ನು ಆರ್ ಬಿಐ ರಚಿಸಿದೆ.
ಚಿನ್ನದ ಮೇಲೆ ಸಾಲ ಪಡೆಯುವ ಸಂದರ್ಭದಲ್ಲಿ, ಸಾಲಗಾರನು ಮುಕ್ತಾಯದ ಸಮಯದಲ್ಲಿ ಪಾವತಿಸುವ ಒಟ್ಟು ಮೌಲ್ಯವನ್ನು ಆಧರಿಸಿ ಸಾಲ-ಮೌಲ್ಯ ಅನುಪಾತವನ್ನು ಲೆಕ್ಕಹಾಕಲಾಗುತ್ತದೆ. ಇಲ್ಲಿ ಹಣಕಾಸು ಸಂಸ್ಥೆಯಿಂದ ನೀಡಲಾದ ಸಾಲವನ್ನು ಲೆಕ್ಕ ಹಾಕುವುದಿಲ್ಲ, ಬದಲಿಗೆ ಸಾಲಗಾರ ಮರುಪಾವತಿ ಮಾಡಬೇಕಾದ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ. ಈ ಸಾಲಗಳಿಗೆ ಗರಿಷ್ಠ ಮಿತಿ 5 ಲಕ್ಷ ರೂ. ಇದೆ. ಈ ಸಾಲಗಳ ಅವಧಿ ಗರಿಷ್ಠ 12 ತಿಂಗಳುಗಳಾಗಿರಬೇಕು ಎಂಬ ನಿಯಮವನ್ನು ಕೂಡ ರೂಪಿಸಿದೆ.