ಬೆಂಗಳೂರು: ಮನೆಯಲ್ಲಿ ಈಗ ಯಾರೂ ಹಣವನ್ನು ಇಟ್ಟುಕೊಳ್ಳುವುದಿಲ್ಲ. ಮನೆಯಲ್ಲಿರುವ ಹಣ ಸುರಕ್ಷಿತವಲ್ಲ. ಅದಕ್ಕೆ ಬಡ್ಡಿಯೂ ಬೆಳೆಯುವುದಿಲ್ಲ. ಕಳ್ಳರು, ದರೋಡೆಕೋರರ ಭಯದ ಕಾರಣ ಪ್ರತಿಯೊಬ್ಬರೂ ಹಣವನ್ನು ಬ್ಯಾಂಕ್ ನಲ್ಲಿ ಇರಿಸುತ್ತಾರೆ. ಆದರೆ, ಖಾಸಗಿ ಬ್ಯಾಂಕ್ ಗಳು ಸೇರಿ ಹಲವು ಬ್ಯಾಂಕ್ ಗಳು ಕೂಡ ಸುರಕ್ಷಿತವಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ, ಜನರು ಹಣವನ್ನು ಠೇವಣಿ ಮಾಡಲು ಯಾವ ಬ್ಯಾಂಕ್ ಗಳು ಹೆಚ್ಚು ಸುರಕ್ಷಿತ? ಆರ್ ಬಿಐ (RBI) ಮೂರು ಬ್ಯಾಂಕ್ ಗಳ ಹೆಸರನ್ನು ಘೋಷಣೆ ಮಾಡಿದೆ.
ಹೌದು, ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲೇ ಬೃಹತ್ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಖಾಸಗಿ ವಲಯದ ಎಚ್ ಡಿ ಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕ್ ಗಳು ದೇಶದಲ್ಲೇ ಅತಿ ಹೆಚ್ಚು ಸುರಕ್ಷತೆ ಹೊಂದಿರುವ ಬ್ಯಾಂಕ್ ಗಳೆಂದು ಆರ್ ಬಿಐ ಘೋಷಣೆ ಮಾಡಿದೆ. ಈ ಮೂರು ಬ್ಯಾಂಕ್ ಗಳು ಸುರಕ್ಷಿತ ಎಂದ ಮಾತ್ರಕ್ಕೆ, ಉಳಿದ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಬಾರದು ಎಂದಲ್ಲ. ಆರ್ ಬಿಐ ಮಾನದಂಡಗಳನ್ನು ಪಾಲಿಸುವಲ್ಲಿ ಇವು ಮುನ್ನಡೆ ಸಾಧಿಸಿದ ಕಾರಣ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂರು ಬ್ಯಾಂಕ್ ಗಳು ಅತ್ಯಂತ ವ್ಯವಸ್ಥಿತವಾಗಿ ಸಾರ್ವಜನಿಕರ ಹಣವನ್ನು ನಿರ್ವಹಿಸುತ್ತವೆ. ಭಾರತದೆಲ್ಲೆಡೆ ಈ ಮೂರು ಬ್ಯಾಂಕ್ ಗಳು ಪಾರದರ್ಶಕತೆ, ಉತ್ತಮ ಲೆಕ್ಕ, ಸಮರ್ಪಕ ಆಡಿಟ್ ನಿಭಾಯಿಸುತ್ತವೆ. ಕಳೆದ ವರ್ಷವೂ ಈ ಮೂರು ಬ್ಯಾಂಕ್ ಗಳನ್ನು ಆರ್ ಬಿಐ ಹೆಚ್ಚು ಸುರಕ್ಷಿತ ಎಂದು ಘೋಷಣೆ ಮಾಡಿತ್ತು.
ಬ್ಯಾಂಕ್ ಸಮಸ್ಯೆ ಎದುರಿಸಿದರೆ, ದಿವಾಳಿಯಾದರೆ ದೇಶದ ಹಣಕಾಸು ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ, ಆರ್ ಬಿಐ ಹಲವು ನಿಯಮಗಳನ್ನು ರೂಪಿಸಿರುತ್ತದೆ. ಈ ಮೂರು ಪ್ರಮುಖ ಬ್ಯಾಂಕ್ ಗಳು ಆರ್ ಬಿಐನ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುತ್ತಿವೆ. ಆ ಮೂಲಕ ಸ್ಥಿರತೆ ತರುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಸಂಚಾರ್ ಸಾಥಿ ಆ್ಯಪ್ ಏಕಿರಬೇಕು? ಏನಿದರ ಉಪಯೋಗಳು?



















